
ನವದೆಹಲಿ, ಫೆಬ್ರವರಿ 26: ನವದೆಹಲಿಯಲ್ಲಿ ಸದ್ಯ ಹಿಂಪಡೆದಿರುವ ಮದ್ಯ ನೀತಿಯಡಿ ಕೇಳಿ ಬಂದ ಭ್ರಷ್ಟಾಚಾರದ ಆರೋಪದ ಮೇಲೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ದಳ ಭಾನುವಾರ ಬಂಧಿಸಿದೆ.
ಮೂಲಗಳ ಪ್ರಕಾರ, ಭಾನುವಾರ ಬೆಳಗ್ಗೆಯಿಂದಲೇ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆಯಿಂದ ಒಂಬತ್ತು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಬಳಿಕ ಬಂಧನ ಮಾಡಲಾಗಿದೆ. ಏಳೆಂಟು ತಿಂಗಳು ಜೈಲಿನಲ್ಲಿ ಇರಲು ಸಿದ್ಧ ಎಂದು ಸಿಸೋಡಿಯಾ ಈ ಹಿಂದೆ ಪ್ರತಿಕ್ರಿಯಿಸಿದ್ದರು. ಅವರ ಕುಟುಂಬವನ್ನು ನೋಡಿಕೊಳ್ಳುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ನವದೆಹಲಿ ಹಾಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಬಂಧನವಾಗಿರುವುದು ಕುತೂಹಲ ಮೂಡಿಸಿದೆ.