
ಬಳ್ಳಾರಿ: ಜಿಲ್ಲಾ ಬಾಲಕಾರ್ಮಿಕ ಯೋಜನೆ, ಕಾರ್ಮಿಕ ಇಲಾಖೆ, ಪೋಲಿಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣ ಘಟಕ ಮತ್ತು ಬಿಡಿಡಿಎಸ್ ಚೈಲ್ಡ್‍ಲೈನ್ ಸಹಯೋಗದೊಂದಿಗೆ ಶುಕ್ರವಾರ ನಗರದಲ್ಲಿ ವಿವಿಧಡೆ ದಾಳಿ ನಡೆಸಿ ಮೂವರು ಮಕ್ಕಳನ್ನು ರಕ್ಷಿಸಲಾಗಿದೆ.
ನಗರದ ಬಂಡಿಹಟ್ಟಿ, ಕೌಲ್‍ಬಜಾರ್, ಗುಗ್ಗರಹಟ್ಟಿ ಮತ್ತು ಟಿ.ಬಿ. ಸ್ಯಾನಿಟೋರಿಯಂ ಹಾಗೂ ಸುತ್ತ ಮುತ್ತಲಿನ ಸ್ಥಳಗಳಲ್ಲಿ ಗ್ಯಾರೇಜ್, ಬೇಕರಿ, ಹೋಟೆಲ್, ಮೆಕ್ಯಾನಿಕ್ ಶಾಪ್, ಕಿರಾಣಿ ಅಂಗಡಿ ಇತ್ಯಾದಿ ಉದ್ದಿಮೆಗಳ ಮೇಲೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರಡಿಯಲ್ಲಿ ನೇಮಕವಾದ ನಿರೀಕ್ಷಕರ ಟಾಸ್ಕ್ ಪೋರ್ಸ್ ಸಮಿತಿ ಅಧಿಕಾರಿಗಳೊಂದಿಗೆ ಆಕಸ್ಮಿಕ ದಾಳಿ ಮಾಡಿ 3 ಬಾಲ ಕಾರ್ಮಿಕ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯವರಿಗೆ ಒಪ್ಪಿಸಲಾಯಿತು.
ಮಕ್ಕಳ ವಯಸ್ಸಿನ ದಾಖಲೆಗಳನ್ನು ಪಡೆದು ಮಾಲೀಕರ ವಿರುದ್ದ ಬಾಲಕಾರ್ಮಿಕ ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ ಅವರು ತಿಳಿಸಿದ್ದಾರೆ.
ಈ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಕಾರ್ಮಿಕ ನಿರೀಕ್ಷಕರಾದ ರವಿದಾಸ್,ಮುಖ್ಯ ಪೇದೆ ಸೈಯದ್ ಇಮ್ರಾನ್, ಚೈಲ್ಡ್ ಲೈನ್ ಸಿಬ್ಬಂದಿಗಳಾದ ಉಮೇಶ್, ಚಂದ್ರಕಲಾ, ರಜನಿ ಮತ್ತಿತರು ಹಾಜರಿದ್ದರು.