ಕುಷ್ಟಗಿ (ಕೊಪ್ಪಳ ಜಿಲ್ಲೆ): ಕೃಷಿ ಇಲಾಖೆಯ ಬೀಜ ಮಾರಾಟದಿಂದ ಬಂದಿದ್ದ ₹33 ಲಕ್ಷ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದರಿಂದ ಜಿಲ್ಲೆಯ ಕುಷ್ಟಗಿಯ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಎಂಬುವವರನ್ನು ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.

‘ರಾಘವೇಂದ್ರ 2022-23ನೇ ವರ್ಷದ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬಿತ್ತನೆ ಬೀಜ ರೈತರಿಗೆ ಮಾರಾಟ ಮಾಡಿ ಬಂದ ಹಣವನ್ನು ಕೃಷಿ ಇಲಾಖೆಗೆ ಪ್ರತಿದಿನ ಜಮೆ ಮಾಡಬೇಕಿತ್ತು. ಸಕಾಲದಲ್ಲಿ ಮಾಡದೆ ಐದಾರು ತಿಂಗಳ ನಂತರ ಜಮೆ ಮಾಡಿದ್ದಾರೆ. ಲಕ್ಷಾಂತರ ಹಣವನ್ನು ತಾತ್ಕಾಲಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದರು. ಹಣ ಜಮೆ ಮಾಡುವುದರಲ್ಲಿ ವಿಳಂಬ ಮಾಡಿದ್ದರಿಂದ ಅಮಾನತು ಮಾಡಲಾಗಿದೆ’ ಎಂದು ಕೃಷಿ ಇಲಾಖೆಯ ಆಯುಕ್ತ ಬಿ.ಶರತ್ ಆದೇಶದಲ್ಲಿ ತಿಳಿಸಿದ್ದಾರೆ.

ರಾಘವೇಂದ್ರ ಕಳೆದ ಡಿ.1 ರಿಂದ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದರಿಂದ ಅವರ ಕುಟುಂಬದವರು ನೀಡಿದ ದೂರಿನ ಅನ್ವಯ ಕುಷ್ಟಗಿ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಕೆಲ ದಿನಗಳ ನಂತರ ಬೆಂಗಳೂರಿನಲ್ಲಿ ಪತ್ತೆಯಾಗಿ ಪುನಃ ಕರ್ತವ್ಯಕ್ಕೆ ಹಾಜರಾಗಿದ್ದರು.

error: Content is protected !!