ಕುಕುನೂರು: ಕುಕನೂರು ತಾಲೂಕಿನ ಬಳಗೇರಿ ಗ್ರಾಮದಿಂದ ಕಲ್ಲೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 6 ಕಿಲೋಮೀಟರ್ ಉದ್ದದ ರಸ್ತೆಯ ಮರು ಡಾಂಬರೀಕರಣ ಕಾರ್ಯವು ಪೂರ್ಣಗೊಂಡು ಕೇವಲ ಎರಡು ದಿನದಲ್ಲಿ ಕಿತ್ತು ಹೋಗಿರುವುದನ್ನು ಮಾಜಿ ಸಚಿವರಾದ ಬಸವರಾಜ್ ರಾಯರೆಡ್ಡಿ ತೋರಿಸುತ್ತಾ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಸರ್ಕಾರ ಹಾಗೂ ಸಚಿವರ ವಿರುದ್ಧ ಆರೋಪದ ಮಳೆಗೈದರು.
ಕಮಿಷನ್ ಸರ್ಕಾರ ಎಂದೇ ಹೆಸರು ಪಡೆದಿರುವ ಸರ್ಕಾರವು ಭ್ರಷ್ಟಾಚಾರದಿಂದ ಕೂಡಿದ್ದು ಕಳಪೆ ಕಾಮಗಾರಿ ನಿರ್ಮಿಸಿದ ಗುತ್ತಿಗೆದಾರರಾಗಲಿ ಅಧಿಕಾರಿಗಳನ್ನಾಗಲಿ ಪ್ರಶ್ನಿಸುವ ನೈತಿಕತೆ ಸರ್ಕಾರ ಹಾಗೂ ಸರ್ಕಾರದ ಅಂಗವಾಗಿರುವ ಸಚಿವರಿಗೆ ಇಲ್ಲವೆಂದು ಹೇಳಿದರು.
ಕಮಿಷನ್ ಪಡೆದ ಕಾರಣದಿಂದ ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಕೇಳುವ ಹಕ್ಕು ಅಧಿಕಾರ ಸದ್ಯ ಸರ್ಕಾರದ ಪ್ರತಿನಿಧಿಗಳಿಗೆ ಇಲ್ಲದಂತೆ ತೋರುತ್ತದೆ, ನಮ್ಮ ಕಾರ್ಯ ಅವಧಿಯಲ್ಲಿ ನಡೆದ ಕಾಮಗಾರಿಯ ರಸ್ತೆಗಳು ಇವತ್ತಿನವರೆಗೂ ಸಹ ಸದೃಢವಾಗಿದ್ದು ಯಾವುದೇ ಲೋಪದೋಷಗಳು ಕಂಡುಬಂದಿಲ್ಲ ಆದರೆ ಇತ್ತೀಚಿಗೆ ಕ್ಷೇತ್ರದಾದ್ಯಂತ ನಡೆದಿರುವ ಕಾಮಗಾರಿಗಳೆಲ್ಲವೂ ಸಂಪೂರ್ಣ ಕಳಪೆಯಿಂದ ಕೂಡಿದ್ದು ರಸ್ತೆಗೆ ಹಾಕಿದ ಡಾಂಬರನ್ನು ಜನ ಬರಿಗೈಯಿಂದ ಕೇಳುತ್ತಿರುವುದು ನಿಜಕ್ಕೂ ಶೋಚನೀಯ, ಇದನ್ನೆಲ್ಲಾ ಕಂಡು ಕ್ಷೇತ್ರದ ಜನಪ್ರತಿನಿಧಿ, ಶಾಸಕ ಹಾಗೂ ಸಚಿವರು ಆದವರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.