
ಆಲೂರು: ಇಡೀ ರಾಜ್ಯದಲ್ಲಿರುವ ತಾಲ್ಲೂಕು ಕೇಂದ್ರಗಳಲ್ಲಿ ವಿದ್ಯುತ್ ಕೇಂದ್ರಗಳು ಇಲ್ಲದ ತಾಲ್ಲೂಕು ಕೇಂದ್ರವೆಂದರೆ ಅದು ಆಲೂರು ತಾಲ್ಲೂಕು. ಶೀಘ್ರದಲ್ಲಿ ವಿದ್ಯುತ್ ಸಮಸ್ಯೆ ಪರಿಹಾರ ಆಗದಿದ್ದರೆ ವಿಧಾನಸಭೆ ಚುನಾವಣೆ ಬಹಿಷ್ಕರಿಸಲು ಜನಸಾಮಾನ್ಯರು ಸಿದ್ಧರಾಗುವ ಹಂತ ತಲುಪಿದ್ದಾರೆ.
ಕೊಡಗಿಹಳ್ಳಿ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ವಿದ್ಯುತ್ ಕೇಂದ್ರ ಒಂದು ತಿಂಗಳಿನಲ್ಲಿ ಪ್ರಾರಂಭವಾಗದಿದ್ದರೆ 5 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 100ಕ್ಕೂ ಅಧಿಕ ಗ್ರಾಮಗಳು ಕಗ್ಗತ್ತಲೆಯಲ್ಲಿ ಮುಳುಗಲಿವೆ. ಅನಿರೀಕ್ಷಿತ ತೊಂದರೆಗಳು ಎದುರಾಗಲು ಎನ್ನುವ ಆತಂಕ ಗ್ರಾಮಸ್ಥರದ್ದಾಗಿದೆ.
ತಾಲ್ಲೂಕಿಗೆ ಎರಡು ಕೇಂದ್ರಗಳು ಮಂಜೂರಾಗಿ ಆರು ವರ್ಷಗಳಾಗಿವೆ. ಪಾಳ್ಯ ಮತ್ತು ಕೊಡಗಿಹಳ್ಳಿ ಗ್ರಾಮದಲ್ಲಿ ಕೇಂದ್ರ ಪ್ರಾರಂಭಿಸಲು ಸ್ಥಳ ಗುರುತಿಸಿ, ಟೆಂಡರ್ ಪ್ರಕ್ರಿಯೆ ಪ್ರಾರಂಭವಾಯಿತು. ಪಾಳ್ಯ ಕೇಂದ್ರದಲ್ಲಿ ಸ್ಥಾಪಿಸಲು ಇದ್ದ ತಾಂತ್ರಿಕ ತೊಂದರೆಗಳು ನಿವಾರಣೆಯಾಗಿ, ಟೆಂಡರ್ ಹಂತಕ್ಕೆ ತಲುಪಿದೆ. ಸದ್ಯದಲ್ಲಿ ಕಾಮಗಾರಿ ಪ್ರಾರಂಭವಾಗುವ ನಿರೀಕ್ಷೆಯಲ್ಲಿದೆ.
ಆದರೆ ಕೊಡಗಿಹಳ್ಳಿ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳದ ತಾಂತ್ರಿಕ ತೊಂದರೆ ಈವರೆಗೂ ನಿವಾರಣೆಯಾಗದೇ ಯೋಜನೆ ನನೆಗುದಿಗೆ ಬಿದ್ದಿದೆ. ಪ್ರತಿಯೊಂದು ಹಂತದಲ್ಲೂ ಅಧಿಕಾರಿಗಳ ಕರ್ತವ್ಯ ಮುಖ್ಯವಾಗಿದ್ದು, ಈವರೆಗೂ ವರದಿ ಸರ್ಕಾರಕ್ಕೆ ತಲುಪದೇ ಇರುವುದರಿಂದ ಈ ಯೋಜನೆ ನನೆಗುದಿಗೆ ಬಿದ್ದಿದೆ.
ಅತಿ ಶೀಘ್ರದಲ್ಲಿ ಕೇಂದ್ರ ಪ್ರಾರಂಭವಾಗದಿದ್ದರೆ ಹುಣಸವಳ್ಳಿ, ದೊಡ್ಡಕಣಗಾಲು, ತಾಳೂರು, ಕಣತೂರು ಮತ್ತು ಮಡಬಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಸುಮಾರು 100 ಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸಾಧ್ಯವಾಗುವುದಿಲ್ಲ ಎಂದು ಸೆಸ್ಕ್ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಇದರಿಂದ ಕುಡಿಯುವ ನೀರು, ದಾರಿ ದೀಪ ಮತ್ತು ಕೃಷಿ ಚಟುವಟಿಕೆಗೆ ಭಾರಿ ಹಿನ್ನಡೆಯಾಗಲಿದೆ.
ಕಂದಲಿ ಕೇಂದ್ರದಿಂದ ವಿದ್ಯುತ್ ಪಡೆಯಲಾಗುತ್ತಿದ್ದು, ಬೇಸಿಗೆಯಲ್ಲಿ ವೋಲ್ಟೇಜ್ ಸಹಿತ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸಂಬಂಧಿಸಿದವರಿಗೆ ಮಾಹಿತಿ ನೀಡಲಾಗಿದೆ. ನಿರಂಜನ್, ಸೆಸ್ಕ್ ಪ್ರಭಾರ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಆಲೂರು.
ವೋಲ್ಟೇಜ್ ಸಹಿತ ವಿದ್ಯುತ್ ಸರಬರಾಜು ಮಾಡಬೇಕು. ಶೀಘ್ ವಿದ್ಯುತ್ ಸಮಸ್ಯೆ ಪರಿಹಾರ ಆಗದಿದ್ದರೆ ವಿಧಾನಸಭೆ ಚುನಾವಣೆ ಬಹಿಷ್ಕರಿಸಲು ತಯಾರಿ ನಡೆಸಲಾಗುವುದು. ದಿಲೀಪ್, ಮಾಜಿ ಉಪಾಧ್ಯಕ್ಷ, ಮಡಬಲು ಗ್ರಾ.ಪಂ.
ಹತ್ತಾರು ವರ್ಷಗಳಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದೇವೆ. ರಾತ್ರಿ ಜಮೀನಿಗೆ ತೆರಳಿ ಕೊಳವೆಬಾವಿ ನೀರು ಹಾಯಿಸುವ ಸಂದರ್ಭದಲ್ಲಿ ಪ್ರಾಣಭಯ ಎದುರಾಗುತ್ತಿದೆ. ಸುದರ್ಶನ್, ಕೆರೆಹಳ್ಳಿ ಗ್ರಾಮಸ್ಥ