ಕೊಪ್ಪಳ: ಪ್ರಧಾನಿ ನರೇಂದ್ರಮೋದಿ ಹಾಗೂ ಸಂಸದ ಸಂಗಣ್ಣ ಕರಡಿ ಬಗ್ಗೆ ಅನಗತ್ಯ ಟೀಕೆ ಮಾಡುವ ನೈತಿಕತೆ ಶಿವರಾಜ ತಂಗಡಗಿಗೆ ಇಲ್ಲ, ತಕ್ಷಣ ಹೇಳಿಕೆ ಹಿಂಪಡೆಯಬೇಕು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ಹೊರತಟ್ನಾಳ್ ಆಗ್ರಹಿಸಿದ್ದಾರೆ.

ನಗರದ ಕೆಯುಡಬ್ಲ್ಯೂಜೆ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದರ ಅಭಿವೃದ್ಧಿ ಕಾರ್ಯದ ಬಗ್ಗೆ ಹಗುರವಾಗಿ ಮಾತನಾಡಿದ್ದು, ಕೂಡಲೇ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ತಂಗಡಗಿ ಅವರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಸದ ಸಂಗಣ್ಣ ರೈಲ್ವೆ ಮೇಲ್ವೇತುವೆ ಹಾಗೂ ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್ ನಿರ್ಮಾಣ ಬಿಟ್ಟರೆ ಬೇರೆ ಏನು ಸಾಧನೆ ಮಾಡಿದ್ದಾರೆ ಎಂದು ತಂಗಡಗಿ ಪ್ರಶ್ನಿಸಿದ್ದಾರೆ. ಸಂಸದರು ಕಳೆದ 10 ವರ್ಷದಲ್ಲಿ ಕ್ಷೇತ್ರದಲ್ಲಿ ಅಪಾರ ಅಭಿವೃದ್ಧಿ ಕಾರ್ಯ ಮಾಡಿದ್ದು,
ಜಿಲ್ಲೆಯಲ್ಲಿ 2 ಕೇಂದ್ರೀಯ ವಿದ್ಯಾಲಯ, 9 ರೈಲ್ವೆ ಸೇತುವೆ ನಿರ್ಮಾಣದ ಜೊತೆಗೆ ಬೈಪಾಸ್ ರಸ್ತೆ ಸೇರಿದಂತೆ ಹುಲಗಿಯ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಚಿಂತನೆ ನಡೆಸಿದ್ದಾರೆ ಎಂದರು.

ಶಿವರಾಜ್ ತಂಗಡಗಿ ಸಚಿವರಾಗಿದ್ದ ಅವಧಿಯಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ನಡೆದ ನೇಮಕಾತಿಯಲ್ಲಿ ತಮ್ಮ ಬೆಂಬಲಿಗರನ್ನು ಅಕ್ರಮವಾಗಿ ನೇಮಕ ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ. ಇನ್ನೂ ಶಾಸಕ ಬಸವರಾಜ ದಡೇಸೂಗುರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಇದನ್ನು ನಿಲ್ಲಿಸಬೇಕು ಎಂದು ತಂಗಡಗಿ ವಿರುದ್ಧ ಆರೋಪ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಕನಕಮೂರ್ತಿ ಚಲವಾದಿ, ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಗವಿಸಿದ್ದಪ್ಪಗಿಣಗೇರಿ, ಬಿಜೆಪಿ ಎಸ್‌ಸಿ ಮೋರ್ಚಾ ತಾಲೂಕಾಧ್ಯಕ್ಷ ಚಂದ್ರಸ್ವಾಮಿ ಹೊಸಮನಿ, ಬಿಜೆಪಿ ಎಸ್‌ಸಿ ಮೋರ್ಚಾ ಮುಖಂಡ ಮಂಜುನಾಥ ಮುಸಲಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!