
ಅದ್ದೂರಿಯಾಗಿ ಗತವೈಭವದ ಉತ್ಸವಕ್ಕೆ ಅಣಿಯಾಗಿ: ಡಿಸಿ ವೆಂಕಟೇಶ್
ಹೊಸಪೇಟೆ (ವಿಜಯನಗರ),ಜ.22: ಹಂಪಿ ಉತ್ಸವದ ಆಚರಣೆಗೆ ನಿಯೋಜನೆಗೊಂಡ ವಿವಿಧ ಸಮಿತಿಯ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಎಲ್ಲಾ ರೀತಿಯಿಂದಲೂ ಅಚ್ಚುಕಟ್ಟಾಗಿ ಮುತುವರ್ಜಿ ವಹಿಸಿ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಹಂಪಿ ಉತ್ಸವ ಆಚರಣೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಂಪಿ ಉತ್ಸವಕ್ಕೆ ನಿರ್ಮಿಸಲಾದ ನಾಲ್ಕು ವೇದಿಕೆಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ವಸ್ತು ಪ್ರದರ್ಶನ ಮಳಿಗೆಗಳು, ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಸಿದ್ಧತೆಯನ್ನು ಹಾಗೂ ಪೂರಕ ಸೌಲಭ್ಯಗಳನ್ನು ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ವಹಿಸಿಕೊಂಡು ಕಾರ್ಯಕ್ರಮಗಳು ಎಲ್ಲಿಯೂ ಲೋಪವಾಗದಂತೆ ನಿರ್ವಹಿಸಬೇಕು ಎಂದು ತಿಳಿಸಿದರು.
ಹಂಪಿ ಉತ್ಸವದ ಮುನ್ನ ದಿನ ಜ.26ರಂದು ಸಂಜೆ ನಗರದಲ್ಲಿ ವಸಂತ ವೈಭವ ಮೆರವಣಿಗೆ ನಡೆಯಲಿದ್ದು, ವಿವಿಧ ಕಲಾತಂಡಗಳು ಸೇರಿದಂತೆ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕ್ರಮವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ಆಶಾ ಕಾರ್ಯಕರ್ತೆಯರನ್ನು ಕರೆತರಲು ಸಾರಿಗೆ ಸೌಲಭ್ಯ ಒದಗಿಸಲು ಹಾಗೂ ಕಲಾವಿದರಿಗಾಗಿ ಸೂಕ್ತ ವ್ಯವಸ್ಥೆ ಕೈಗೊಳ್ಳಲು ತಿಳಿಸಿದರು.
ನಗರದಲ್ಲಿ ವಸಂತ ವೈಭವ ಮತ್ತು ಲೇಸರ್ ಶೋ: ಹಂಪಿ ಉತ್ಸವದ ಮುನ್ನ ದಿನ ಜ.26ರಂದು ಸಂಜೆ 4 ಗಂಟೆಯಿಂದ ನಗರದ ವಡಕರಾಯ ದೇವಸ್ಥಾನದಿಂದ ಭವ್ಯ ಮೆರವಣಿಗೆ ನಡೆಯಲಿದೆ. ವಿವಿಧ ಕಲಾತಂಡಗಳ ನೂರಾರು ಕಲಾವಿದರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಮುಖ್ಯರಸ್ತೆಗಳಿಂದ ಸಾಗಿಬರುವ ಮೆರವಣಿಗೆ ಮುನ್ಸಿಪಲ್ ಮೈದಾನವನ್ನು ತಲುಪಲಿದೆ. ನಂತರ ಮೈದಾನದಲ್ಲಿ ಲೇಸರ್ ಶೋ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ವೇದಿಕೆಗಳಲ್ಲಿ ಚಿಕಿತ್ಸಾ ಸೌಲಭ್ಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ: ಉತ್ಸವದ ಅಂಗವಾಗಿ ಕಾರ್ಯಕ್ರಮ ನಡೆಯಲಿರುವ ವೇದಿಕೆಗಳು ಸೇರಿದಂತೆ ಹಂಪಿಯ ವಿವಿಧೆಡೆ ಒಟ್ಟು 13 ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.
ಅದೇ ರೀತಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ ಕೈಗೊಂಡು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ಕ್ರಮಕೈಗೊಳ್ಳಲು ತಿಳಿಸಿದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಪ್ರದರ್ಶನ: ಕೃಷಿ ದರ್ಶನ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಆಯಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಾಹಸ, ಗ್ರಾಮೀಣ ಕ್ರೀಡೆ ಜೊತೆಗೆ ಅಂಗವಿಕಲರಿಗೂ ಸ್ಪರ್ಧೆ: ಹಂಪಿ ಉತ್ಸವದಲ್ಲಿ ಆಯೋಜಿಸಲಾಗುವ ಕುಸ್ತಿ, ಸಾಹಸ ಕ್ರೀಡೆ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುವ ಜೊತೆಗೆ ವಿಶೇಷವಾಗಿ ಅಂಗವಿಕಲರಿಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲು ಕ್ರಮಕೈಗೊಳ್ಳಲು ಸೂಚಿಸಿದರು.
ಜನಪದ ವಾಹಿನಿ, ತುಂಗಾರತಿಗೆ ಸಿದ್ಧತೆ: ಕಲಾತಂಡಗಳಿಂದ ಕೈಗೊಳ್ಳಲಾಗುವ ಜಾನಪದ ವಾಹಿನಿ ಹಾಗೂ ತುಂಗಾರತಿ ಧಾರ್ಮಿಕ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧತೆಯನ್ನು ಕೈಗೊಳ್ಳಲು ಸೂಚಿಸಿದರು.
ಹಂಪಿ ಉತ್ಸವದಲ್ಲಿ ಪುಸ್ತಕ ಪ್ರದರ್ಶನ, ಕವಿಗೋಷ್ಠಿ, ವಿಚಾರ ಸಂಕಿರಣ, ಚಿತ್ರಕಲೆ, ಶಿಲ್ಪಕಲೆ, ಛಾಯಾಗ್ರಹಣ ಸ್ಪರ್ಧೆ ಮತ್ತು ಪ್ರದರ್ಶನಕ್ಕೆ ಸಿದ್ಧತೆ ಹಾಗೂ ಶಾಲಾ ಮಕ್ಕಳಿಗೆ ಪ್ರಬಂಧ, ಚರ್ಚಾ ಸ್ಪರ್ಧೆಗಳ ಆಯೋಜನೆಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ನಗರದಲ್ಲೂ ವಿದ್ಯುತ್ ದೀಪಾಲಂಕಾರ: ನೂತನ ಜಿಲ್ಲೆಯಾದ ನಂತರ ಮೊಟ್ಟಮೊದಲ ಬಾರಿಗೆ ಹಂಪಿ ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತಿದ್ದು, ಜಿಲ್ಲಾ ಕೇಂದ್ರ ಹೊಸಪೇಟೆ ನಗರ ಸೇರಿದಂತೆ ಹಂಪಿಗೆ ತೆರಳುವ ಮಾರ್ಗಗಳಿಗೂ ವಿದ್ಯುತ್ ದೀಪಾಲಂಕಾರ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲು ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಹಾಗೂ ಹಂಪಿ ವಿಶ್ವ ಪಾರಂಪರಿಕಾ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ಧರಾಮೇಶ್ವರ, ಹರಪನಹಳ್ಳಿ ಉಪವಿಭಾಗಧಿಕಾರಿ ಟಿ.ವಿ.ಪ್ರಕಾಶ್, ಧ್ವನಿ ಮತ್ತು ಬೆಳಕು ಉಸ್ತುವಾರಿ ಎಲ್.ಡಿ.ಜೋಷಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೀರನಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್ ರಂಗಣ್ಣವರ್ ಹಾಗೂ ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
*-*-*-*