
ತಂಬಾಕು ನಿಯಂತ್ರಣ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿ
—
ಕೊಪ್ಪಳ: ತಂಬಾಕಿನಿಂದ ಪ್ರತಿ 6 ಸೆಕೆಂಡಿಗೊಮ್ಮೆ ವ್ಯಕ್ತಿಯೊಬ್ಬ ಸಾವಿಗೀಡಾಗುತ್ತಾನೆ. ಹೀಗಾಗಿ ತಂಬಾಕು ನಿಯಂತ್ರಣ ಕಾರ್ಯಕ್ರಮಗಳು ಕೊಪ್ಪಳ ಜಿಲ್ಲೆಯಲ್ಲಿ ಸಹ ಅಚ್ಚುಕಟ್ಟಾಗಿ, ಇನ್ನೂ ಪರಿಣಾಮಕಾರಿಯಾಗಿ ನಡೆಯುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೇಶ್ವಾನ್ ವಿಡಿಯೋ ಸಭಾಂಗಣದಲ್ಲಿ ಜನವರಿ 9ರಂದು ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಜಿಲ್ಲಾಮಟ್ಟದ ಸಮನ್ವಯ ಸಮಿತಿಯ ಮೂರನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಂಬಾಕು ನಿಯಂತ್ರಣ ಕಾನೂನು-ಕೋಟ್ಪಾ-2003ನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಸೆಕ್ಷನ್ 4ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಸೆಕ್ಷನ್ 5ರ ಪ್ರಕಾರ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹಿರಾತು, ಉತ್ತೇಜನ, ಪ್ರಾಯೋಜಕತ್ವವನ್ನು ಸಹ ನಿಷೇಧಿಸಲಾಗಿದೆ. ಸೆಕ್ಷನ್ 6ಎ ಪ್ರಕಾರ ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಹಾಗೂ ಅಪ್ರಾಪ್ತ ವಯಸ್ಕರಿಂದ ತಂಬಾಕು ಉತ್ಪನ್ನಗಳ ಮಾರಾಟ ನಡೆಸುವುದು ಶಿಕ್ಷಾರ್ಹ ಅಪರಾಧವಾಗಿದೆ, ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಾರ್ವಜನಿಕರಲ್ಲಿ ಮನವಿ: ಜಿಲ್ಲಾಸ್ಪತ್ರೆ ಕೊಪ್ಪಳದಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರವಿದ್ದು ತಂಬಾಕು ಸೇವನೆ ಧೂಮಪಾನಿಗಳಿಗೆ ದುಷ್ಪರಿಣಾಮಗಳ ಕುರಿತು ಇಲ್ಲಿ ಉಚಿತ ಸಮಾಲೋಚನೆ ಮಾಡಲಾಗುತ್ತದೆ. ಆಧುನಿಕ ಯಂತ್ರಗಳ ಸಹಾಯದಿಂದ ತಂಬಾಕು ಸೇವನೆ ಪ್ರಮಾಣವನ್ನು ಪತ್ತೆ ಹಚ್ಚಲಾಗುವುದು ಹಾಗೂ ಅಗತ್ಯವಿರುವವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಫೌಜಿಯಾ ತರುನ್ನುಮ್ ಅವರು ಮಾತನಾಡಿ, ತಂಬಾಕಿನಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಶ್ವಾಸ ಸಂಬಂಧಿ ಇತ್ಯಾದಿ ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ದೂಮಸಹಿತ ತಂಬಾಕು ವಸ್ತುಗಳಲ್ಲಿ 7000 ರಾಸಾಯನಿಕ ವಸ್ತುಗಳಿದ್ದು, ಅದರಲ್ಲಿ 68ರಷ್ಟು ಕ್ಯಾನ್ಸರ್‌ಕಾರಕ ವಸ್ತುಗಳಾಗಿವೆ.
ಧೂಮರಹಿತ ತಂಬಾಕು ಉತ್ಪನ್ನಗಳಲ್ಲಿ 3095 ರಸಾಯನಿಕಗಳಿದ್ದು ಅದರಲ್ಲಿ 28ರಷ್ಟು ಕ್ಯಾನ್ಸರ್ ಕಾರಕ ವಸ್ತುಗಳಿವೆ. ವಿಶ್ವದಾದ್ಯಂತ ತಡೆಗಟ್ಟಬಹುದಾದ ಖಾಯಿಲೆ ಮತ್ತು ಮರಣಕ್ಕೆ, ಶ್ವಾಸಕೋಶ ಕಾಯಿಲೆಗೆ ತಂಬಾಕು ಸೇವನೆಯೇ ಕಾರಣವಾಗಿದೆ. ಪ್ರತಿ ವರ್ಷ ವಿಶ್ವದಾದ್ಯಂತ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವೆನೆಯಿಂದ ಉಂಟಾಗುವ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಎಚ್ಚರಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಲಕಾನಂದ ಕೆ. ಅವರು ಮಾತನಾಡಿ, ತಂಬಾಕಿನಲ್ಲಿ ಸುಮಾರು 3000 ದಿಂದ 4000 ವಿಷಯುಕ್ತ ರಾಸಾಯನಿಕ ವಸ್ತುಗಳು ಇರುತ್ತವೆ. ನಿಕೋಟಿನ್, ಅಮೋನಿಯ, ಕಾರ್ಬನ್ ಮಾನಾಕ್ಸೈಡ್, ಹೈಡ್ರೋಜನ್ ಸೈನೆಡ್, ಟಾರ್, ಮೆಂಥಾಲ್, ಸತು ಮತ್ತು ಅರ್ಸೆನಿಕ್ ನಂತಹ ವಿಷಯುಕ್ತ ವಸ್ತುಗಳು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ ಎಂದು ತಿಳಿಸಿದರು.
ತಂಬಾಕು ನಿಯಂತ್ರಣ ಕಾನೂನು-ಕೋಟ್ಪಾ-2003ನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿದ್ದು, ಏಪ್ರೀಲ್ 2022ರಿಂದ ಡೆಸೆಂಬರ್2022ರವರೆಗೆ ಸೆಕ್ಷನ್ 4ರಡಿ 430 ಪ್ರಕರಣಗಳನ್ನು ದಾಖಲಿಸಿ 58,200 ರೂ. ವಸೂಲಿ ಮಾಡಲಾಗಿದೆ. ಅದೇ ರೀತಿ ಸೆಕ್ಷನ್ 6(ಬಿ)ನಡಿ 338 ಪ್ರಕರಣಗಳನ್ನು ದಾಖಲಿಸಿ 38,800 ರೂ ವಸೂಲಿ ಮಾಡಲಾಗಿದೆ.
ಏಪ್ರೀಲ್ 2022ರಿಂದ ಡಿಸೆಂಬರ್ 2022ರವರೆಗೆ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ 1720 ಜನರಿಗೆ ಸಮಾಲೋಚನೆ ನಡೆಸಲಾಗಿದೆ. 878 ಜನರ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಲಾಗಿದ್ದು, ಇದರಿಂದ 270ರಷ್ಟು ಜನರು ತಂಬಾಕು ಸೇವನೆಯನ್ನು ತ್ಯಜಿಸಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ನಂದಕುಮಾರ ಅವರು ಸಭೆಗೆ ತಿಳಿಸಿದರು.
2017ರಿಂದ 2022ರವರೆಗೆ ಜಿಲ್ಲೆಯ 456 ಶಾಲೆಗಳಲ್ಲಿ ಮತ್ತು 51 ಕಾಲೇಜುಗಳಲ್ಲಿ ತಂಬಾಕು ನಿಯಂತ್ರಣ ಕುರಿತಂತೆ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 2022-23ನೇ ಸಾಲಿನಲ್ಲಿ 55 ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ತಂಬಾಕು ನಿಯಂತ್ರಣದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸುಮಾರು 10,356 ಮಕ್ಕಳು ಈ ಜಾಗೃತಿ ಕಾರ್ಯಕ್ರಮದ ಸದುಪಯೋಗ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ 52 ಶಾಲೆಗಳನ್ನು ತಂಬಾಕು ಮುಕ್ತ ಶಾಲೆ ಎಂದು ಘೋಷಿಸಲಾಗಿದೆ. ಜಾರಿ ತಂಡವು 21 ಕಡೆ ಭೇಟಿ ನೀಡಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಎಂ.ಎಂ.ರಡ್ಡೇರ್, ಕೊಪ್ಪಳ ಸಿಡಿಪಿಓ ರೋಹಿಣಿ ಕೋಟಗಾರ, ಜಿಲ್ಲಾ ವಾರ್ತಾಧಿಕಾರಿಗಳಾದ ಗವಿಸಿದ್ದಪ್ಪ ಹೊಸಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳು, ಕ್ಷಯ ರೋಗ ನಿಯಂತ್ರಣಾಧಿಕಾರಿಗಳು, ಕುಟುಂಬ ಕಲ್ಯಾಣಾಧಿಕಾರಿಗಳು, ರೋಗವಾಹಕ ಆಶ್ರಿತ ನಿಯಂತ್ರಣಾಧಿಕಾರಿಗಳು, ಕುಷ್ಠರೋಗ ನಿರ್ಮೂಲನಾಧಿಕಾರಿಗಳು, ಜಿಲ್ಲಾ ಅಂಕಿತ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು, ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲಾ ಸರ್ವೇಕ್ಷಣಾ ವಿಭಾಗದ ಸಿಬ್ಬಂದಿ ಮತ್ತು ಇನ್ನೀತರರು ಇದ್ದರು.