
ಕೊಪ್ಪಳ ಜನವರಿ 09 (ಕರ್ನಾಟಕ ವಾರ್ತೆ): ದಕ್ಷಿಣ ಭಾರತದ ಕುಂಬಮೇಳ ಎಂದೇ ಪ್ರಸಿದ್ದಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರೆಯಲಿ ಈ ಬಾರಿ ಕೃಷಿ ಇಲಾಖೆಯಿಂದ ಆಯೋಜಿಸಿರುವ ಕೃಷಿ ವಸ್ತು ಪ್ರದರ್ಶನವು ತುಂಬಾ ಆಕರ್ಷಿಣಿಯವಾಗಿದ್ದು, ರೈತರನ್ನು ಮತ್ತು ಸಾರ್ವಜನಿಕರನ್ನು ಕೈ ಬೀಸಿ ಕರೆಯುವಂತಿದೆ.
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಕೃಷಿ ಇಲಾಖೆಯಿಂದ ಜ. 8 ರಿಂದ ಜ. 10 ರವರೆಗೆ ಮೂರು ದಿನಗಳ ಕಾಲ ಮಠದ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಕೃಷಿ ವಸ್ತು ಪ್ರದರ್ಶನ-2023ಕ್ಕೆ ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ಭಾನುವಾರದಂದು ಚಾಲನೆ ನೀಡಿದರು.
ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಮತ್ತು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಕೃಷಿ ವಸ್ತು ಪ್ರದರ್ಶನದ ಮಳಿಗೆಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು, ಕೃಷಿ ಇಲಾಖೆ ಅಧಿಕಾರಿಗಳು, ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕೃಷಿ ವಸ್ತು ಪ್ರದರ್ಶನದಲ್ಲಿ ವಿವಿಧ ಅಲಂಕಾರಿಕ ಸಂಪ್ರದಾಯಿಕ ಕೃಷಿಯ ಸಲಕರಣೆಗಳ ಪ್ರದರ್ಶಿಕೆ, ಸಾವಯವ ಕೃಷಿ, ಸಮಗ್ರ ಕೃಷಿ ಪದ್ಧತಿ, ಎಲ್ಲಾ ಬಗೆಯ ಸಿರಿಧಾನ್ಯಗಳ ಅಲಂಕಾರಿಕ ರಂಗೋಲಿ ಜೊತೆ ಆರೋಗ್ಯದಲ್ಲಿ ಸಿರಿಧಾನ್ಯಳ ಮಹತ್ವ ಫಲಕಗಳು ಮತ್ತು ದಿಬ್ಬದಿಂದ ಕಣಿವೆ ತತ್ವದ ಆಧರದ ಮೇಲೆ ಮಣ್ಣು ನೀರಿನ ಉಪಚರಗಳು, ಖುಷ್ಕಿ ತೋಟಗಾರಿಕೆ, ಅರಣ್ಯ, ಉತ್ಪಾದನಾ ವ್ಯವಸ್ತೆ, ಜೀವನೋಪಯ ಚಟುವಟಿಕೆಗಳನ್ನೊಳಗೊಂಡ ಜಲಾನಯನ ಮಾದರಿ ಹಾಗೂ ಇಲಾಖೆಯ ಯೋಜನೆಗಳ ಮಾಹಿತಿಗಳ ಬಗ್ಗೆ ವಿವರಣೆ ಅನಾವರಣಗೊಳಿಸಲಾಗಿದೆ.
ಎಲ್ಲಾ ಸಾರ್ವಜನಿಕರು ಮತ್ತು ರೈತರು ಪಿ.ಎಮ್. ಕಿಸಾನ್ ಯೋಜನೆಯ ಇ-ಕೆವೈಸಿ ಮಾಹಿತಿ ಮತ್ತು ಕೃಷಿ ವಸ್ತು ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಲು ಕೊಪ್ಪಳ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಟಿ.ಎಸ್ ರುದ್ರೇಶಪ್ಪ ಹಾಗೂ ಉಪ ಕೃಷಿ ನಿರ್ದೇಶಕರಾದ ಸಹದೇವ ಯರಗೊಪ್ಪ ಅವರು ತಿಳಿಸಿರುತ್ತಾರೆ.