ಗಂಗಾವತಿ: ನಶೆ ಏರಿಸುವ ಮತ್ತು ವ್ಯಸನಿಗಳಗುವ ಔಷಧಗಳ ಮಾರಾಟದಲ್ಲಿ ಜಾಗ್ರತೆ ವಹಿಸಿ ಎಂದು ಗಂಗಾವತಿ ಉಪ ವಿಭಾಗದ ಉಪ ಪೋಲೀಸ್
ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಔಷಧ ವ್ಯಾಪಾರಿಗಳಿಗೆ ಕರೆ ನೀಡಿದರು.
ಸೋಮವಾರ ಸಂಜೆ ನಗರದ ಔಷಧೀಯ ಭವನದಲ್ಲಿ ಔಷಧ ವ್ಯಾಪಾರಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಗರದ ಹಲವು ಕಡೆ ನಶೆ ಬರಿಸುವ ಔಷಧ ಮಾರಾಟ ಮತ್ತು ಸೇವನೆಯ ಪ್ರಕರಣಗಳು ಕಂಡು ಬಂದಿದ್ದು,ಅದಕ್ಕಾಗಿ ಔಷಧ ಮಾರಾಟಗಾರರು ಜಾಗ್ರತೆಯಿಂದ ಔಷಧ ಮಾರಾಟ ಮಾಡಬೇಕೆಂದು ತಿಳಿಸಿದರು.
ನಗರ ಠಾಣೆಯ ಇನ್ಸಪೆಕ್ಟರ್ ಪ್ರಕಾಶ ಮಾಳೆ ಮಾತನಾಡಿ,ನಗರದ ಒಂದಷ್ಟು ಪ್ರದೇಶಗಳನ್ನು
ಹೆಸರಿಸಿ, ಕೆಲವು ನಿರ್ದಿಷ್ಟ ಟ್ಯಾಬ್ಲೆಟ್ ಗಳನ್ನು ನೀರಿನಲ್ಲಿ ಕರಗಿಸಿ,ಇನ್ಸೂಲಿನ್ ಸಿರಂಜಿಗಳಿಂದ ನರಗಳ ಮೂಲಕ ಸೇವನೆ ಮಾಡುತ್ತಿರುವ ವರದಿಗಳು ಕೇಳಿ ಬಂದಿದ್ದು , ಅಂತಹ ಔಷಧಗಳ ಮಾರಾಟ ಜಾಲದ ಪತ್ತೆಗೆ ಪೋಲೀಸ್ ಇಲಾಖೆ ಪ್ರಯತ್ನಿಸುತ್ತಿದೆ,ಇದರ ಕುರಿತು ಸಾರ್ವಜನಿಕರು ಇಂತಹ ಔಷಧಗಳ ಮಾರಾಟ ಮತ್ತು ಸೇವನೆಯ ಬಗ್ಗೆ ಮಾಹಿತಿ ನೀಡಬೇಕೆಂದು ಕೋರಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಮಾತನಾಡಿ,ತಜ್ಞ ವೈಧ್ಯರ ಸಲಹಾ ಚೀಟಿಗಳಿಗೆ ಮಾತ್ರ ಔಷಧ ಮಾರಾಟ ಮಾಡುವ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡಬೇಕೆಂದು ಹೇಳಿದರು. ಭತ್ತದ ಕಣಜ ಎಂದು ಹೆಸರಾಗಿರುವ ಗಂಗಾವತಿ ನಗರಕ್ಕೆ ಕಪ್ಪು ಚಿಕ್ಕೆ ಆಗಬಲ್ಲ ಯಾವುದೇ ಪ್ರಕರಣಗಳು ನಡೆಯಬಾರದು ಎಂದು ತಿಳಿಸಿದರು.
ಔಷಧ ಮತ್ತು ಕಾಂತಿವರ್ದಕ ಕಾಯ್ದೆ ಹಾಗೂ ನಿಯಮಗಳ ಉಲ್ಲಂಘನೆ ಕಂಡು ಬಂದರೆ,ತಮ್ಮ ಇಲಾಖೆಗೆ ಮಾಹಿತಿ ನೀಡಬೇಕೆಂದು ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರಾದ ವೆಂಕಟೇಶ ರಾಠೋಡ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜನರಿಗೆ ಜಾಗ್ರತೆ ಮೂಡಿಸಲು, ವಿತರಿಸಲಾಗುತ್ತಿರುವ ಪೋಷ್ಟರಗಳನ್ನು ಪೋಲೀಸ್ ಅಧಿಕಾರಿಗಳು, ಔಷಧ ನಿಯಂತ್ರಕರು ಮತ್ತು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರು ಜಂಟಿಯಾಗಿ ಪ್ರದರ್ಶಿಸಿದರು.
ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮತ್ತು ರಾಜ್ಯ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಕಾರ್ಯಕ್ರಮವನ್ನು ನಿರೂಪಿಸಿದರು.
ನಗರ ಸಭಾ ಸದಸ್ಯರಾದ ಮನೋಹರ ಸ್ವಾಮಿ ಹಿರೇಮಠ ಮತ್ತು ವಾಸುದೇವ ನವಲಿ ಸೇರಿದಂತೆ 80 ಕ್ಕೂ ಹೆಚ್ಚು ಜನ ಔಷಧ ವ್ಯಾಪಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು .