ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್‌ ತೀರ್ಪು ಪ್ರಕಟಿಸಿದೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಿಎಂ ರಾಜೀನಾಮೆ ವಿಚಾರ ಟ್ರೆಂಡಿಂಗ್‌ನಲ್ಲಿದೆ.

ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ತೀರ್ಪನ್ನು ನ್ಯಾ.ನಾಗಪ್ರಸನ್ನ ನೇತೃತ್ವದ ಪೀಠ ಇಂದು ಪ್ರಕಟಿಸಿದೆ.

ಹೈಕೋರ್ಟ್ ಹೇಳಿದ್ದೇನು?: ಸಿಎಂ ವಿರುದ್ಧ ಖಾಸಗಿ ದೂರುದಾರರೇ ಅನುಮತಿ ಕೋರಬಹುದು. ಸಂವಿಧಾನದ ವಿಧಿ ’17 ಎ’ ಅಡಿ ಅನುಮತಿ ಕೋರಿದ್ದು ಸರಿಯಾಗಿದೆ. ಸಚಿವ ಸಂಪುಟದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ್ದು ಸರಿಯಾಗಿದೆ. ಈ ಪ್ರಕರಣದಲ್ಲಿ ರಾಜ್ಯಪಾಲರು ವಿವೇಚನೆ ಬಳಸಿದ್ದಾರೆ. ’17 ಎ’ ಅಡಿಯ ಆದೇಶ ಸಮರ್ಪಕವಾಗಿದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಹೇಳಿದೆ.

ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್​​, ಸಿಎಂ ಕುಟುಂಬಸ್ಥರು ಫಲಾನುಭವಿಗಳಾಗಿದ್ದಾರೆ. ಹೀಗಾಗಿ ರಾಜ್ಯಪಾಲರ ಕ್ರಮ ಸೂಕ್ತವಾಗಿದೆ. ಸಿಎಂ ಎತ್ತಿದ್ದ ಎಲ್ಲಾ ಕಾನೂನಿನ ಪ್ರಶ್ನೆಗಳನ್ನು ತಿರಸ್ಕರಿಸಲಾಗಿದೆ ಎಂದಿದೆ.

ತೀರ್ಪು ಹೊರಬೀಳುತ್ತಿದ್ದಂತೆಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹೈಕೋರ್ಟ್‌ ತೀರ್ಪನ್ನು ಸ್ವಾಗತಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಬಿಜೆಪಿ ಕೂಡ ಈ ಸಂಬಂಧ ಎಕ್ಸ್‌ ಖಾತೆಯಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸಿದೆ.

*ಬಾಕ್ಸ್ *

ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾನು ಮೊದಲು ಹೈಕೋರ್ಟ್ ತೀರ್ಪು ಏನಿದೆ ಎಂದು ತಿಳಿದುಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಮೇಲೆ, ಕುಟುಂಬದ ಮೇಲೆ ದೊಡ್ಡ ಷಡ್ಯಂತ್ರ ಮಾಡಿದ್ದಾರೆ. ಯಾವುದೇ ತನಿಖೆ ಮಾಡಿದ್ರೂ ಸಿಎಂ ಸಿದ್ದರಾಮಯ್ಯ ಕ್ಲೀನ್ ಆಗಿ ಹೊರಬರ್ತಾರೆ. ಅವರು ಮಾಡಿರುವ ಕಾರ್ಯಕ್ರಮ, ಕೊಡುಗೆ ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಕೋರ್ಟ್ ಆದೇಶದ ಪ್ರತಿ ನೋಡಿ ನಾನು ಪ್ರತಿಕ್ರಿಯೆ ನೀಡುತ್ತೇನೆ. ಸಿಎಂ ಹಾಗೂ ಅವರ ಕುಟುಂಬದ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಇದರಿಂದ ಹೊರಗೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.

error: Content is protected !!