*ಕಾಲಚಕ್ರ ವರದಿ *
ಗಂಗಾವತಿ :ಸೇವಾಭದ್ರತೆ ಮತ್ತು ಕನಿಷ್ಠ ವೇತನ ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ಸದಸ್ಯರು ನಗರದ ಬಿಸಿಎಂ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಕಚೇರಿ ವ್ಯವಸ್ಥಾಪಕ ಸುರೇಶ ಉದ್ದವ್ವನವರ ಗೆ ಮನವಿ ಸಲ್ಲಿಸಿದರು.
ಸಮಿತಿ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ಬಿಸಿಎಂ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹಾಸ್ಟೆಲ್‌ಗಳಲ್ಲಿ 20ವರ್ಷಗಳಿಂದ ದುಡಿಯುತ್ತಿದ್ದರೂ ಕಾಯಂ ಸೇವೆ ಆಗಿಲ್ಲ. ಕನಿಷ್ಠ ವೇತನ ಯೋಜನೆ ಜಾರಿಯಾಗಿಲ್ಲ. ಕಡಿಮೆ ಸಂಬಳಕ್ಕೆ ಮುಖ್ಯ ಅಡುಗೆದಾರರು ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು ಸೇವಾ ಭದ್ರತೆಯಿಲ್ಲದೆ ದುಡಿಯುತ್ತಿದ್ದಾರೆ. ಕಾಯಂ ನೌಕರರು ಮತ್ತು ವಾರ್ಡನಗಳಿಂದ ಶೋಷಣೆ ಗೊಳಾಗುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.
ಹಕ್ಕುಗಳಿಗಾಗಿ ಹೋರಾಟ ನಡೆಸಿದರೆ, ಪೊಲೀಸರ ಮೂಲಕ ಹಲ್ಲೆ ನಡೆಸಲಾಗುತ್ತದೆ. ನೇರ ಪಾವತಿ ಯೋಜನೆಯಡಿ ವೇತನ ವಿತರಣೆ, ಮಾಸಿಕ ಕನಿಷ್ಠ 31ಸಾವಿರ ರೂ. ವೇತನ ನಿಗದಿ, ವಾರದ ರಜೆ, ಕೆಲಸ ಅವಧಿ ನಿಗದಿ, ವೇತನ ಚೀಟಿ, ನೇಮಕ ಆದೇಶ ಪತ್ರ, ಐಡಿ,ಕಾರ್ಡ್ ಸೇವಾ ಪ್ರಮಾಣ ಪತ್ರ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹ್ಮದ್ ರಫೀಕ್, ಪದಾಧಿಕಾರಿಗಳಾದ ಫಕೀರಪ್ಪ, ಶಾಂತಮ್ಮ, ಶರಣಮ್ಮ, ಶಿವಕುಮಾರ, ಬಾಳೇಶ ಅಂಗಡಿ ಇತರರಿದ್ದರು.