ಗಂಗಾವತಿ :ಗಂಗಾವತಿ ತಾಲೂಕು ವ್ಯಾಪ್ತಿಯಲ್ಲಿ ಕಳೆದ 6 ತಿಂಗಳಿಂದ ಅಕ್ರಮ ಮದ್ಯ ಮಾರಾಟ ನಿಯಂತ್ರಣ ಹಾಗೂ ಎಂ.ಆರ್.ಪಿ. ಬೆಲೆಗೆ ಮದ್ಯ ಮಾರಾಟ ಮಾಡಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತಂತೆ ಮಾಧ್ಯಮಗಳಲ್ಲಿ ನಿರಂತರ ವರದಿಗಳೂ ಕೂಡ ಪ್ರಕಟವಾಗುತ್ತಿವೆ. ಆದರೂ ಕೂಡ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಣ ತಪ್ಪಿದೆ. ಯಾವ ಮದ್ಯದ ಅಂಗಡಿಗಳಲ್ಲಿಯೂ ಕೂಡ ಎಂ.ಆರ್.ಪಿ. ಬೆಲೆಗೆ ಮದ್ಯ ಮಾರಾಟ ಮಾಡುತ್ತಿಲ್ಲ. ಸಾಲದೆಂಬಂತೆ ಗ್ರಾಮೀಣ ಭಾಗಗಳಲ್ಲಿ ಅಪ್ರಾಪ್ತ ಮಕ್ಕಳಿಗೂ ಕೂಡ ಮದ್ಯ ಸರಳವಾಗಿ ದೊರೆಯುತ್ತಿದೆ. ಇದರಿಂದ ಅಪ್ರಾಪ್ತ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವುದರ ಜೊತೆಗೆ ಅಕಾಲಿಕ ಮರಣ ಹೊಂದುತ್ತಿದ್ದಾರೆ. ತಾಲೂಕು ವ್ಯಾಪ್ತಿಯಲ್ಲಿ ಕರ್ನಾಟಕ ಅಬಕಾರಿ ಕಾಯಿದೆ 1965ರ ನಿಬಂಧನೆಗಳನ್ನು ಮದ್ಯದ ಅಂಗಡಿಗಳು ಸಂಪೂರ್ಣ ಗಾಳಿಗೆ ತೂರಿ ವಹಿವಾಟು ನಡೆಸುತ್ತಿದ್ದಾರೆ. ಈ ಕುರಿತಂತೆ ನಿರಂತರ ಹೋರಾಟಗಳು ನಡೆಯುತ್ತಿದ್ದರೂ ಕೂಡ ಅಬಕಾರಿ ನಿರೀಕ್ಷಕ ವಿಠಲ್ ಪಿರಂಗಣ್ಣನವರ್ ಮದ್ಯದ ಅಂಗಡಿ ಮಾಲೀಕರ ಪರ ನಿಂತು ಅಕ್ರಮಗಳಿಗೆ ಸಾಥ್ ನೀಡುತ್ತಿದ್ದಾರೆ.
ಈ ಹೋರಾಟಗಳಿಗೆ ಸಂಬಂಧಿಸಿದಂತೆ ಹೋರಾಟಗಾರರು ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆಗಳು ನಡೆದ ಪ್ರಕರಣಗಳು ಸದ್ಯಕ್ಕೆ ಕೋರ್ಟ್ ಮೆಟ್ಟಿಲೇರಿವೆ. ಗಂಗಾವತಿ ತಾಲೂಕಿನ ಇತಿಹಾಸದಲ್ಲಿಯೇ ಈಮಟ್ಟಿಗಿನ ಅಕ್ರಮ ಮದ್ಯ ದಂಧೆ ಯಾವತ್ತೂ ನಡೆದಿರುವುದಿಲ್ಲ. ವಿಠಲ್ ಪಿರಂಗಣ್ಣನವರ್ ಅಬಕಾರಿ ನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ಅವಧಿಯಲ್ಲಿ ಅಕ್ರಮ ಮದ್ಯ ದಂಧೆ ಮಿತಿಮೀರಿದೆ. ಒಬ್ಬ ಅಬಕಾರಿ ನಿರೀಕ್ಷಕನಾಗಿ ಸಾರ್ವಜನಿಕ ಹಿತಾಸಕ್ತಿ ಕಾಪಾಡುವುದು ಹಾಗೂ ಕರ್ನಾಟಕ ಅಬಕಾರಿ ಕಾಯಿದೆ 1965ರ ನಿಬಂಧನೆಗಳ ಪಾಲನೆ ಮಾಡಬೇಕಾಗಿದ್ದು ಆತನ ಕರ್ತವ್ಯವಾಗಿರುತ್ತದೆ. ಆದರೆ, ಇದ್ಯಾವುದಕ್ಕೂ ಕ್ಯಾರೇ ಎನ್ನದ ವಿಠಲ್ ಪಿರಂಗಣ್ಣನವರ್ ತಾವು ಒಬ್ಬ ಅಬಕಾರಿ ನಿರೀಕ್ಷಕರು ಎಂಬುವುದನ್ನು ಮರೆತು ಲಿಕ್ಕರ್ ಮಾಫಿಯಾದ ಡಾನ್ ಎಂಬಂತೆ ಗೂಂಡಾ ಪಡೆಗಳನ್ನು ಬೆಂಗಾವಲು ಮಾಡಿಕೊಂಡು ಮೆರೆಯುತ್ತಿದ್ದಾರೆ. ಗಂಗಾವತಿ ತಾಲೂಕಿನ ಸ್ವಾಸ್ಥ್ಯ ಕೆಡುವ ಮೊದಲೇ ಇವರನ್ನು ಕಾನೂನುರೀತ್ಯಾ ತೀವ್ರ ವಿಚಾರಣೆಗೆ ಒಳಪಡಿಸಿ ಕೂಡಲೇ ವರ್ಗಾವಣೆ ಅಥವಾ ಅಮಾನತುಗೊಳಿಸಬೇಕು. ಈ ಎಲ್ಲಾ ಪ್ರಕ್ರಿಯಗಳನ್ನು ಒಂದು ತಿಂಗಳ ಅವಧಿಯಲ್ಲಿ ಮುಗಿಸಬೇಕು ಎಂದು ತಮ್ಮಲ್ಲಿ ಮನವಿ ಮಾಡುತ್ತೇವೆ.
ತಪ್ಪಿದಲ್ಲಿ ಗಂಗಾವತಿ ತಾಲೂಕು ವ್ಯಾಪ್ತಿಯ ಪ್ರತಿ ಗ್ರಾಮದಿಂದ ಸಂತ್ರಸ್ಥ ಮಹಿಳೆಯರೊಂದಿಗೆ ಗಂಗಾವತಿ ನಗರದ ಅಬಕಾರಿ ಇಲಾಖೆಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಆಯೋಗ ಹಾಗೂ ಮಾನವ ಹಕ್ಕು ಆಯೋಗದ ಗಮನ ಸೆಳೆದು ಕಾನೂನುರೀತ್ಯಾ ಹೋರಾಟ ನಡೆಸಲಾಗುವುದು ಎಂದು ಈ ಮೂಲಕ ತಮ್ಮ ಗಮನಕ್ಕೆ ತರಬಯಸುತ್ತೇವೆ ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ರಮೇಶ ಕಾಳೆ ಅವರು ಅಬಕಾರಿ ಉಪ ನಿರೀಕ್ಷಕ ಹೊಸಪೇಟೆ, ಜಿಲ್ಲಾಧಿಕಾರಿ, ಜಿಲ್ಲಾಡಳಿತ ಭವನ, ಕೊಪ್ಪಳ, ಅಬಕಾರಿ ಜಿಲ್ಲಾಧಿಕಾರಿ, ಕೊಪ್ಪಳ ಇವರಿಗೆ ದೂರು ನೀಡುವ ಮೂಲಕ ಒತ್ತಾಯಿಸಿದ್ದಾರೆ.