ಗಂಗಾವತಿ : ಹಣವಾಳ ಗ್ರಾಮ ಪಂಚಾಯಿತಿಯಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಉಪಾಧ್ಯಕ್ಷೆಯೊಬ್ಬರ ತಲೆದಂಡವಾಗಿದ್ದು, ಉಪಾಧ್ಯಕ್ಷೆಯ ಸ್ಥಾನದಿಂದ ತೆಗೆದು ಹಾಕಿ ಸದಸ್ಯತ್ವ ರದ್ದು ಮಾಡಿ, ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಆದೇಶ ಹೊರಡಿಸಿದ್ದಾರೆ.
ಗಂಗಾವತಿ ತಾಲೂಕಿನ ಹಣವಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ ವೆಂಕಟೇಶ ಭೋವಿ ಅವರನ್ನು ಉಪಾಧ್ಯಕ್ಷೆಯ ಸ್ಥಾನದಿಂದ ತೆಗೆದು ಹಾಕಿ, ಸದಸ್ಯತ್ವ ರದ್ದು ಮಾಡಿ, ಮುಂದಿನ ಆರು ವರ್ಷಕಾಲ ಯಾವುದೇ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಆದೇಶಿಸಲಾಗಿದೆ.
ಸರ್ಕಾರದ ಮತ್ತು ಇಲಾಖೆಯ ನಿಯಮಗಳನ್ನು ಮೀರಿ ಹಣಕಾಸು ಅವ್ಯವಹಾರಕ್ಕೆ ಸಾಥ್ ನೀಡಿರುವ ಈ ಪ್ರಕರಣದ ಪ್ರಮುಖ ರೂವಾರಿ ಎನ್ನಲಾಗುತ್ತಿರುವ ನಿರ್ಗಮಿತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯು. ಮಲ್ಲಿಕಾರ್ಜುನ ವಿರುದ್ಧ ಶಿಸ್ತುಕ್ರಮ ಕೈಗೊಂಡಿರುವ ಇಲಾಖೆ, ದುರುಪಯೋಗವಾಗಿರುವ ಹಣದ ಅರ್ಧ ಮೊತ್ತ ವಸೂಲಿ ಮಾಡುವಂತೆ ಸೂಚಿಸಲಾಗಿದೆ.
ಹಣವಾಳ ಗ್ರಾಮ ಪಂಚಾಯಿತಿಯ ಹಾಲಿ ಅಧ್ಯಕ್ಷೆ ಯಂಕಮ್ಮ ಈರಣ್ಣ ಕುರಿ ಎಂಬುವವರು ಸಲ್ಲಿಸಿದ ದೂರಿನ ಮೇರೆಗೆ ವಿಚಾರಣೆ ಕೈಗೊಂಡ ಇಲಾಖೆಯ ಅಧಿಕಾರಿಗಳಿಗೆ ಹಣಕಾಸು ಅಕ್ರಮ ನಡೆದಿರುವುದು ಗೋಚರಿಸಿದ ಹಿನ್ನೆಲೆಯಲ್ಲಿ ಪಿಡಿಒ ಯು. ಮಲ್ಲಿಕಾರ್ಜುನ ಮತ್ತು ಉಪಾಧ್ಯಕ್ಷೆ ನಂದಿನಿ ವೆಂಕಟೇಶ ಭೋವಿ ಅವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿದ್ದರು. ಈ ಹಿನ್ನೆಲೆ ಇದೀಗ ಕ್ರಮವಾಗಿದೆ.
ಹಣವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ 2021-22 ಹಾಗೂ 2022-23ನೇ ಸಾಲಿನಲ್ಲಿ ಖಾಸಗಿ ಸಂಸ್ಥೆಗಳ ಹೆಸರು ಸೂಚಿಸಿ ಆಗಿನ ಅಧ್ಯಕ್ಷೆಯಾಗಿದ್ದ ನಂದಿನಿ, ತಮ್ಮ ಸಂಬಂಧಿಕರ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಸರ್ಕಾರದ ಅನುದಾನ ಹೊರತು ಪಡಿಸಿ ಕರವಸೂಲಿಯಲ್ಲಿ ಈ ಕಾಮಗಾರಿಗಳಿಗೆ ಹಣ ಸಂದಾಯ ಮಾಡಲು ಅವಕಾಶವಿಲ್ಲದ್ದರ ಮಧ್ಯೆಯೂ ನಿಯಮಬಾಹಿರವಾಗಿ ಪಿಡಿಒ ಮಲ್ಲಿಕಾರ್ಜುನ ಅವರ ಜತೆ ಶಾಮೀಲಾಗಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಯಂಕಮ್ಮ ದೂರು ದಾಖಲಿಸಿದ್ದರು.
ಅಧಿಕಾರಿಗಳು ಸಲ್ಲಿಸಿದ ಹಣಕಾಸು ಅಕ್ರಮದ ವರದಿ ಶಿಫಾರಸ್ಸಿನ ಮೇರೆಗೆ ಹಣವಾಳ ಗ್ರಾಮ ಪಂಚಾಯಿತಿಯ ಆಗಿನ ಅಧ್ಯಕ್ಷೆ, ಹಾಲಿ ಉಪಾಧ್ಯಕ್ಷೆ ನಂದಿನಿ ಅವರನ್ನು ಹುದ್ದೆಯಿಂದ ಅನರ್ಹತೆ ಮಾಡಿ ಹಾಗೂ ಸದಸ್ಯತ್ವ ಸ್ಥಾನವನ್ನು ರದ್ದುಗೊಳಿಸಿ ಹಾಗೂ ಮುಂದಿನ ಆರು ವರ್ಷ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ, ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಆದೇಶ ಹೊರಡಿಸಿದ್ದಾರೆ.