ಚಿಕ್ಕಬಳ್ಳಾಪುರ: ವೈದ್ಯರಿಲ್ಲದ ಪೆರೇಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿನ ಸಿಬ್ಬಂದಿ ನಿರ್ಲಕ್ಷ್ಯದಿಂದ ಹೆರಿಗೆಯ ಸಂದರ್ಭದಲ್ಲಿ ಮಗು ಮೃತಪಟ್ಟಿರುವ ಆರೋಪ ಕೇಳಿ ಬಂದಿದ್ದು ಕುಟುಂಬಸ್ಥರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಹುಟ್ಟೂರಾದ ಪೆರೇಸಂದ್ರ ಪ್ರಾಥಮಿಕ ಆರೋಗ್ಯದ ಕೇಂದ್ರಕ್ಕೆ ಹೆರಿಗೆ ನೋವಿನಿಂದ ಗ್ರಾಮದ ಅಶ್ವಿನಿ ದಾಖಲಾಗಿದ್ದಾರೆ.
ಇದೇ ವೇಳೆ ಸಾಮಾನ್ಯ ಹೆರಿಗೆ ಹೆಸರಿನಲ್ಲಿ ವಿಳಂಬ ಮಾಡಿ, ಪರಿಸ್ಥಿತಿ ಅಪಾಯದ ಹಂತಕ್ಕೆ ಹೋದಾಗ ಬೇರೆ ಆಸ್ಪತ್ರೆಗೆ ಹೋಗಲು ಸಿಬ್ಬಂದಿ ಶಿಫಾರಸು ಮಾಡಿದ್ದು ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿದೆ. ಇದರಿಂದ ಆಕ್ರೋಶಗೊಂಡ ಜನರು ಮಗು ಸಾವಿಗೆ ಕಾರಣರಾದ ಸಿಬ್ಬಂದಿಯ ಮೇಲೆ ಕಾನೂನು ಕ್ರಮ ವಹಿಸಬೇಕೆಂದು ಪ್ರತಿಭಟಿಸಿದರು. ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತಾಲೂಕು ಆರೋಗ್ಯಾಧಿಕಾರಿ ಮಂಜುಳಾ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಇಲ್ಲಿಯೇ ನಾರ್ಮಲ್ ಡೆಲಿವರಿ ಮಾಡಿಸುತ್ತೆವೆಂದು ಹೇಳಿ, ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ವರೆಗೂ ಕಾಲಹರಣ ಮಾಡಿದ ಶುಶ್ರೂಷಕಿಯರು, ಕೊನೆಗೆ ಹೊಟ್ಟೆಯಲ್ಲಿ ಮಗು ಮೃತಪಟ್ಟಿರುವುದನ್ನು ತಿಳಿದುಕೊಂಡು ಸಾಗ ಹಾಕಿದರು ಎಂದು ಮೃತ ಮಗುವಿನ ತಂದೆ ರಘು ಆರೋಪಿಸಿದ್ದಾರೆ.
* ಐದು ವರ್ಷಗಳ ನಿರೀಕ್ಷೆ
ಅಶ್ವಿನಿ ಮತ್ತು ರಘು ದಂಪತಿ ಐದು ವರ್ಷಗಳಿಂದಲೂ ಮಗುವಿನ ನಿರೀಕ್ಷೆಯಲ್ಲಿದ್ದರು. ಕಾಲ ಕಾಲಕ್ಕೆ ಗರ್ಭಿಣಿಯ ಆರೋಗ್ಯ ತಪಾಸಣೆ ನಡೆಸಿದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಇನ್ನು ಹೆರಿಗೆಗೆ ಆಸ್ಪತ್ರೆಗೆ ಬಂದಾಗಲೂ ಸಾಮಾನ್ಯ ಹೆರಿಗೆಯಾಗುವುದರ ಬಗ್ಗೆ ಹೇಳಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಮಗುವಿನ ಪ್ರಾಣ ಪಕ್ಷಿ ಹಾರಿ ಹೋಗಿದೆ.