ಬೆಂಗಳೂರು: ನ್ಯಾಯಾಲಯದ ಆದೇಶದ ಹೊರತಾಗಿಯೂ ಹಿರಿಯ ನಾಗರಿಕರೊಬ್ಬರಿಗೆ ಅವರ ಭೂಮಿಯ ದಾಖಲೆ ಸರಿಪಡಿಸಿಕೊಡಲು ಉಡಾಫೆ ತೋರಿದ್ದ ತಹಶೀಲ್ದಾರ್ ಗಳಿಗೆ ಹೈಕೋರ್ಟ್ 3 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಅರ್ಜಿದಾರರಿಗೆ ಕೊಡಿಸುವಂತೆ ಆದೇಶಿಸಿದೆ.

ಹೈಕೋರ್ಟ್ ಆದೇಶದ ಹೊರತಾಗಿಯೂ ತಮ್ಮ ಜಮೀನಿನ ದಾಖಲೆ ಸರಿಪಡಿಸಿಕೊಟ್ಟಿಲ್ಲ ಎಂದು ಮಂಡ್ಯದ 71 ವರ್ಷದ ವೃದ್ಧೆ ಪಾರ್ವತಮ್ಮ ಎಂಬುವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ಹೊರಡಿಸಿದೆ.

ಪೀಠ ತನ್ನ ಆದೇಶದಲ್ಲಿ, ಹೈಕೋರ್ಟ್ ಆದೇಶದ ಹೊರತಾಗಿಯೂ ವೃದ್ದೆಯ ಭೂ ದಾಖಲೆಯನ್ನು ಅಧಿಕಾರಿಗಳು ಸರಿಪಡಿಸಿಕೊಟ್ಟಿಲ್ಲ. ಇಳಿ ವಯಸ್ಸಿನಲ್ಲಿ ಅನಗತ್ಯ ಅಲೆದಾಡುವಂತೆ ಮಾಡಿದ್ದಾರೆ. ಹೀಗಾಗಿ 2014 ರ ಜುಲೈ 24 ರಿಂದ 2022ರ ಫೆಬ್ರವರಿ 10 ರವರೆಗೆ ಪಾಂಡವಪುರ ತಾಲ್ಲೂಕಿನಲ್ಲಿ ತಹಶೀಲ್ದಾರ್ ಗಳಾಗಿ ಕೆಲಸ ಮಾಡಿರುವ ಅಧಿಕಾರಿಗಳಿಂದ ಈ ದಂಡವನ್ನು ವಸೂಲಿ ಮಾಡಬೇಕು. ಅವರಿಗೆ ಹೈಕೋರ್ಟ್ ದಂಡ ವಿಧಿಸಿರುವ ವಿಚಾರವನ್ನು ಸೇವಾ
ದಾಖಲೆಯಲ್ಲೂ ನಮೂದಿಸಬೇಕು.

ದಂಡದ ಮೊತ್ತವನ್ನು ಅಧಿಕಾರಿಗಳಿಂದ ವಸೂಲಿ ಮಾಡಿ ಅದನ್ನು ಅರ್ಜಿದಾರರಿಗೆ ಪಾವತಿಸಬೇಕು. ನ್ಯಾಯಾಲಯದ ಈ ಆದೇಶವನ್ನು ಪಾಲಿಸದಿದ್ದರೆ ಜಿಲ್ಲಾಧಿಕಾರಿ ವಿರುದ್ಧವೂ ಗಂಭೀರ ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಎಚ್ಚರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ ಬಳಿಕ ಹೈಕೋರ್ಟ್ ನೋಟಿಸ್‌ ಆಧರಿಸಿ ಸರ್ಕಾರ ವಿವರವಾದ ಮಾರ್ಗಸೂಚಿ ಹೊರಡಿಸಿದೆ. 2022ರ ಜನವರಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸಾರ್ವಜನಿಕರ ಭೂಮಿ ಸರ್ವೇ, ಪೋಡಿ, ದುರಸ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ತಿಳಿಸಲಾಗಿದೆ. ಇಷ್ಟಾದರೂ ಅಧಿಕಾರಿಗಳು ಕೆಲಸ ಮಾಡದಿರುವುದು ದುರಾದೃಷ್ಟಕರ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.

error: Content is protected !!