ಬಳ್ಳಾರಿ: ಸಚಿವ ಬಿ.ನಾಗೇಂದ್ರ ತವರು ಕ್ಷೇತ್ರದಲ್ಲಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಹರಗಿನ ಡೋಣಿ ಗ್ರಾಮದಲ್ಲಿ ಒಂದು ಹನಿ ನೀರು ಬರುತ್ತಿಲ್ಲ. ದಿನ ನಿತ್ಯದ ಬಳಕೆ ಹಾಗೂ ಕುಡಿಯುವ ನೀರಿಗಾಗಿ ಜನರು ಸಂಕಷ್ಟ ಪಡುತ್ತಿದ್ದಾರೆ.
ಬೇಸಿಗೆ ಮುನ್ನವೇ ಕರುನಾಡಿನಲ್ಲಿ ನೀರಿನ ಹಾಹಾಕಾರ ಎದುರಾಗಿದೆ.
ಗ್ರಾಮದ ಸುತ್ತ ಎಲ್ಲೂ ಕೆರೆ ಇಲ್ಲದ ಪರಿಣಾಮ ಅಂತರ್ಜಲ ಕುಸಿದಿದೆ. ಹೀಗಾಗಿ ಗ್ರಾಮದಲ್ಲಿ ಒಂದೇ ಒಂದು ಬೋರ್‌ವೆಲ್‌ನಲ್ಲಿ ನೀರು ಬರುತ್ತಿಲ್ಲ.
ಜಾನುವಾರುಗಳಿಗೆ ನೀರಿಲ್ಲದ ಗ್ರಾಮಸ್ಥರು ಅವುಗಳನ್ನ ಈಗಾಗಲೇ ಮಾರಾಟ ಮಾಡಿದ್ದಾರೆ. ಪ್ರತಿವರ್ಷವೂ ಈ ಗ್ರಾಮದವ್ರು ನೀರಿನ ಸಮಸ್ಯೆಯನ್ನ ಅನುಭವಿಸುತ್ತಿದ್ದಾರೆ. ನೀರಿನ ಸಮಸ್ಯೆ ಬಗೆ ಹರಿಸುವಂತೆ ಸಾಕಷ್ಟು ಮನವಿ ಮಾಡಿದರೂ ಕೂಡ ಕ್ಯಾರೆ ಅಂದಿಲ್ಲ. ಕನಿಷ್ಠ ಕುಡಿಯುವ ನೀರು ಕೊಡದ ಸರ್ಕಾರದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರವಾಗುತ್ತಿದ್ದಂತೆ ಸಚಿವ ನಾಗೇಂದ್ರ ಅವರು ಪೈಪ್‌ಲೈನ್ ಮೂಲಕ ಗ್ರಾಮಕ್ಕೆ ನೀರು ಪೂರೈಕೆ ಮಾಡಿದ್ದಾರೆ. ಹಾಗೂ ಗ್ರಾಮಕ್ಕೆ ಕೆರೆ ನಿರ್ಮಾಣದ ಬಗ್ಗೆ ಸಚಿವ ನಾಗೇಂದ್ರ ಭರವಸೆ ನೀಡಿದ್ದಾರೆ.
ನೀರಿನ ಸಮಸ್ಯೆ ಕಡಿಮೆಯಾಗದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಮತದಾನದ ಬಹಿಷ್ಕಾರದ ಎಚ್ಚರಿಕೆಯನ್ನ ಕೊಟ್ಟಿದ್ದಾರೆ. ಈ ಹಿಂದೆಯೂ ಕೂಡ ನೀರಿಗಾಗಿ ಗ್ರಾಮಸ್ಥರು ವಿಧಾನಸಭಾ ಚುನಾವಣೆಯಲ್ಲಿ ಮತದಾನವನ್ನ ಬಹಿಷ್ಕಾರ ಮಾಡಿದ್ದರು.