ಬಳ್ಳಾರಿ:ಕೆಎಸ್‌ಆರ್ಟಿಸಿ ಬಸ್ ಚಾಲಕ ಮತ್ತು ಕಂಡಕ್ಟರ್ ಗೆ ಕ್ಷುಲ್ಲಕ ಕಾರಣಕ್ಕೆ ಸುಮಾರು ಮೂವತ್ತು ಜನರ ಗುಂಪು ಹಿಗ್ಗಾಮುಗ್ಗಾ ಥಳಿಸಿದ್ದು ಚಾಲಕ ಮತ್ತು ಕಂಡಕ್ಟರ್ ರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಬಸ್ ಸಂಡೂರಿನಿಂದ ಬಳ್ಳಾರಿಗೆ ಹೋಗುತ್ತಿತ್ತು.ಸಂಡೂರಿನಲ್ಲಿ ಕೆಲ ಮಹಿಳೆಯರು ಬಸ್ ಹತ್ತಿದ್ದು ನಮ್ಮ ಕಡೆಯವರು ಬರಲಿದ್ದಾರೆ.ಸ್ವಲ್ಪ ಹೊತ್ತು ಬಸ್ ನಿಲ್ಲಿಸಿ ಎಂದು ಕೇಳಿದ್ದಾರೆ.
ಅದಕ್ಕೆ ಡ್ರೈವರ್ ಐದು ನಿಮಿಷ ಬಸ್ ನಿಲ್ಲಿಸಿದ್ದು ಐದು ನಿಮಿಷ ಆದರೂ ಯಾರೂ ಬರದ ಕಾರಣ ಬಸ್ ನ್ನು ಮುಂದೆ ಓಡಿಸಿದರು.
ಇದರಿಂದ ಕೆರಳಿದ ಮಹಿಳೆಯರು ಬಸ್ ನಿಮ್ಮಪ್ಪಂದಾ ಎಂದು ಗಲಾಟೆ ಶುರು ಮಾಡಿದರು.ಅವರ ಕಡೆಯವರಿಗೆ ಫೋನ್ ಮಾಡಿದರು.ಕೊನೆಗೆ ಸುಮಾರು ನಲವತ್ತು ಜನರ ಗುಂಪು ಬಸ್ ಅನ್ನು ಹಿಂಬಾಲಿಸಿಕೊಂಡು ಬಂದಿದೆ. ಬಳ್ಳಾರಿ ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆ, ಏಕಾಏಕಿ ಬಸ್ ಒಳಗೆ ನುಗ್ಗಿದ ಗುಂಪು ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ಮಾಡಿದೆ.
ಇದರಿಂದ ಚಾಲಕ ಮತ್ತು ನಿರ್ವಾಹಕರ ತಲೆ, ಮುಖ, ಬೆನ್ನು ಭಾಗಗಳಿಗೆ ತೀವ್ರ ಗಾಯಗಳಾಗಿವೆ. ಸದ್ಯ ನಿರ್ವಾಹಕ ಮಲ್ಲಿಕಾರ್ಜುನ ಮತ್ತು ಚಾಲಕ ಪಂಪಣ್ಣ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಬಳ್ಳಾರಿಯ ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.