
ಕುಷ್ಟಗಿ: ಪಟ್ಟಣದಲ್ಲಿ ಅನಧಿಕೃತ ಫ್ಲೆಕ್ಸ್‌ಗಳ ಹಾವಳಿ ಮುಂದುವರಿದಿದ್ದು ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದ್ದ ಪುರಸಭೆ ನಿರ್ಲಕ್ಷ್ಯವಹಿಸಿರುವುದು ಕಂಡುಬಂದಿದೆ.
ರಾಜಕೀಯ, ಧಾರ್ಮಿಕ ಆಚರಣೆ, ಜನ್ಮದಿನ ಹೀಗೆ ಯಾವುದೇ ಕಾರ್ಯಕ್ರಮಗಳಾದರೂ ನೂರಾರು ಫ್ಲೆಕ್ಸ್‌ಗಳು ಎಲ್ಲೆಂದರಲ್ಲಿ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕಂಡುಬರುತ್ತಿವೆ.
ಇದರಲ್ಲಿ ರಾಜಕೀಯ ವ್ಯಕ್ತಿಗಳು, ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳ ಪಾಲು ಹೆಚ್ಚಿದೆ.
ನಿಯಮ ಲೆಕ್ಕಕ್ಕಿಲ್ಲ: ಪ್ರಚಾರ ಫಲಕಗಳನ್ನು ಅಳವಡಿಸುವುದಕ್ಕೆ ನಿಯಮಗಳಿವೆ. ನಿರ್ದಿಷ್ಟ ಸ್ಥಳಗಳಲ್ಲಿ ಕರ ಪಾವತಿಸುವ ವಾಣಿಜ್ಯ ಸಂಕೀರ್ಣಗಳು, ಸರ್ಕಾರದ ಕಚೇರಿಗಳ ಮುಂದೆ ಹಾಗೂ ಸಾರ್ವಜನಿಕರು, ವಾಹನ ಚಾಲಕರಿಗೆ ತೊಂದರೆಯಾಗದ ರೀತಿಯಲ್ಲಿ ಅಳವಡಿಸುವುದು ಕಡ್ಡಾಯ. ಆದರೆ ಇಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು ಅವುಗಳನ್ನು ಪಾಲಿಸುವವರು ಇಲ್ಲ. ಯಾರು ಎಷ್ಟೇ ಫ್ಲೆಕ್ಸ್‌ಗಳನ್ನು ಎಲ್ಲೆಂದರಲ್ಲಿ ಅಳವಡಿಸಿದರೂ ಅದನ್ನು ಕೇಳುವವರಿಲ್ಲ. ಪುರಸಭೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಕಟ್ಟುನಿಟ್ಟಿನ ಕ್ರಮ ಜರುಗಿಸುವುದಕ್ಕೆ ಅವಕಾಶವಿದ್ದರೂ ನಿಷ್ಕ್ರೀಯರಾಗಿರುವುದು ಅಚ್ಚರಿ ಮೂಡಿಸಿದೆ ಎಂದು ಪ್ರಕಾಶ ಪಾಟೀಲ, ಬಸವರಾಜ ಇತರರು ಆರೋಪಿಸಿದರು.
ಶುಲ್ಕವೆಷ್ಟು: ಪುರಸಭೆ ನಿಯಮಗಳ ಪ್ರಕಾರ ನಿರ್ದಿಷ್ಟ ಅಳತೆಯ ಪ್ರತಿ ಫ್ಲೆಕ್ಸ್ ಅನ್ನು ಒಂದು ವಾರದವರೆಗೆ ಮಾತ್ರ ತಲಾ ₹300 ಶುಲ್ಕ ಪಾವತಿಸಿ ಪರವಾನಗಿ ಪಡೆದ ನಂತರವಷ್ಟೇ ಅಳವಡಿಸಬೇಕು. ಆದರೆ ಪುರಸಭೆ ಸಿಬ್ಬಂದಿ ಈ ಕುರಿತು ‘ಪ್ರಜಾವಾಣಿ’ಗೆ ನೀಡಿದ ಮಾಹಿತಿಯ ಪ್ರಕಾರ ಸೆ.21ರ ಸಂಜೆವರೆಗೆ ಒಂದಕ್ಕೂ ಪರವಾನಗಿ ನೀಡಿಲ್ಲ, ಯಾರೂ ಶುಲ್ಕ ಪಾವತಿಸದಿರುವುದು ಸ್ಪಷ್ಟವಾಯಿತು.
ಪುರಸಭೆ ಕಚೇರಿ, ಮಾರುತಿ ವೃತ್ತ, ನ್ಯಾಯಾಲಯ ಸಂಕೀರ್ಣ, ತಾಲ್ಲೂಕು ಪಂಚಾಯಿತಿ, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ರಾಷ್ಟ್ರೀಯ ಹೆದ್ದಾರಿ ಹೀಗೆ ಎಲ್ಲೆಂದರಲ್ಲಿ ನೂರಾರು ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರಿಂದ ಕಚೇರಿಗಳು, ವಾಣಿಜ್ಯ ಸಂಕೀರ್ಣಗಳು ಮರೆಯಾಗಿವೆ, ವಾಹನ ಚಾಲಕರಿಗೂ ಅಡ್ಡಿಯಾಗುತ್ತಿವೆ. ಈ ಸಮಸ್ಯೆಯನ್ನು ನಿವಾರಿಸುವುದಕ್ಕೆ ಪುರಸಭೆ ಪ್ರಯತ್ನಿಸಿಲ್ಲ ಎಂದು ಸಾರ್ವಜನಿಕರು ದೂರಿದರು.
ಸಿಬ್ಬಂದಿಗೆ ಬೆದರಿಕೆ: ಫ್ಲೆಕ್ಸ್‌ಗಳನ್ನು ಅಳವಡಿಸುವುದಕ್ಕೆ ನಾವೇ ಒತ್ತಾಯ ಮಾಡಿ ಶುಲ್ಕ ಪಾವತಿಸುವಂತೆ ಹೇಳಬೇಕು. ನೆಪಕ್ಕೆ ಬೆರಳೆಣಿಕ ಫಲಕಗಳಿಗೆ ಮಾತ್ರ ಶುಲ್ಕ ಪಾವತಿಸಿ ನೂರಾರು ಫ್ಲೆಕ್ಸ್‌ಗಳನ್ನು ಅಳವಡಿಸುವುದು ಸಾಮಾನ್ಯ. ಈ ಬಗ್ಗೆ ಪ್ರಶ್ನಿಸಿದರೆ ನಮ್ಮ ಗತಿ ನೆಟ್ಟಗಾಗುವುದಿಲ್ಲ, ರಾಜಕೀಯ ವ್ಯಕ್ತಿಗಳು ಬೆದರಿಕೆಯೊಡ್ಡುತ್ತಾರೆ ಎಂದು ಹೆಸರು ಬಹಿರಂಗಪಡಿಸದ ಪುರಸಭೆ ಸಿಬ್ಬಂದಿ ‘ಕಾಲಚಕ್ರ ವಾಹಿನಿ ‘ ಬಳಿ ಅಸಹಾಯಕತೆ ತೋಡಿಕೊಂಡರು.
ಧರಣೇಂದ್ರಕುಮಾರ್ ಪುರಸಭೆ ಮುಖ್ಯಾಧಿಕಾರಿಯಾರೇ ಆಗಲಿ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು ನಿಯಮ ಉಲ್ಲಂಘಿಸಿದ ಫಲಕಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು