ಗಂಗಾವತಿ: ಗಣಿ, ಭೂ ವಿಜ್ಞಾನ ಇಲಾಖೆಯ ಪರವಾನಿಗೆ ಇಲ್ಲದೆ ಅಕ್ರಮವಾಗಿ ಲಾರಿಗಳ ಮೂಲಕ ಕಂಕರ್ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ತಿಳಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಎರಡು ಲಾರಿಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿ, ಕೇಸ್ ದಾಖಲಿಸಿದ ಘಟನೆ ತಾಲೂಕಿನ ವೆಂಕಟಗಿರಿ ಭಾಗದಲ್ಲಿ ನಡೆದಿದೆ.

ವೆಂಕಟಗಿರಿಯ ಸಾಯಿಬಾಬಾ ಕ್ರಷರ್ ಮಿಷನ್ ನಿಂದ ಪರವಾನಗೆ ಇಲ್ಲದೆ ಎರಡು ಲಾರಿಗಳಲ್ಲಿ ಕಂಕರ್ ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಮಾಹಿತಿಯ ಮೇರೆಗೆ ಗಣಿ ಭೂವಿಜ್ಞಾನ ಇಲಾಖೆಯ ಅಧಿಕಾರಿ ಸನಿಯತ್ ಹಾಗೂ ಇತರೆ ಸಿಬ್ಬಂದಿ ವರ್ಗದವರು ದಾಳಿ ನಡೆಸಿ ತಲಾ ಒಂದು ಲಾರಿಗೆ 25 ಸಾವಿರ ರೂ. ಗಳನ್ನು ದಂಡ ವಿಧಿಸಿ ಕೇಸ್ ದಾಖಲಿಸಿದ್ದಾರೆ.

ಮಲ್ಲಾಪೂರ ಭಾಗದಲ್ಲಿ ಅಕ್ರಮವಾಗಿ ದ್ರಾಕ್ಷಿ ಬೆಳೆಯ ಕಲ್ಲು ಕಂಬಗಳನ್ನು ನಿಷೇಧಿತ ಬೆಟ್ಟಗಳಲ್ಲಿ ಒಡೆದು ಎಡದಂಡೆಯ ಕಾಲುವೆ ಮೇಲೆ ಬೃಹತ್ ಗಾತ್ರದ ಲಾರಿಗಳು ಮತ್ತು ಟ್ರಕ್ಸ್ ಗಳಲ್ಲಿ ಸಾಗಾಣಿಕೆ ಮಾಡುವ ಮೂಲಕ ಕಾಲುವೆ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ.

ವೆಂಕಟಗಿರಿ, ಮಲ್ಲಾಪೂರ ಭಾಗದಲ್ಲಿ ವ್ಯಾಪಕ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಗಣಿ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಬೆರಳೆಣಿಕೆಯಷ್ಟು ದಾಳಿ ಮತ್ತು ಕೇಸ್ ದಾಖಲಿಸುತ್ತಾರೆಂಬ ಅರೋಪ ಕೇಳಿ ಬರುತ್ತಿದೆ

ಅಕ್ರಮ ಕಲ್ಲು ಗಣಿಗಾರಿಕೆ, ಅಕ್ರಮ ಮರಳು ಸಾಗಾಣಿಕೆ ತಾಲೂಕಿನಲ್ಲಿ ಅತಿ ಹೆಚ್ಚು ನಡೆಯುತ್ತಿದ್ದು ಇದನ್ನು ತಡೆಯುವ ಕಾರ್ಯ ಟಾಸ್ಕ್ ಫೋರ್ಸ್‌ ಕಮಿಟಿ ಮಾಡುತ್ತಿಲ್ಲ. ಟಾಸ್ಕ್ ಫೋರ್ಸ್‌ ಕಮಿಟಿಯಲ್ಲಿ ಕಂದಾಯ, ಪೊಲೀಸ್, ಲೋಕೋಪಯೋಗಿ ಇಲಾಖೆ, ತಾ.ಪಂ, ಪಿಡಿಓಗಳು, ಅರಣ್ಯ ಇಲಾಖೆಯ ಅಧಿಕಾರಿಗಳಿದ್ದರೂ ಕಾರ್ಯಾಚರಣೆ ನಡೆಯುತ್ತಿಲ್ಲ ಎಂಬ ಅರೋಪ ಕೇಳಿ ಬರುತ್ತಿದೆ.


error: Content is protected !!