ಗಂಗಾವತಿ : ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇವಲ ಶಿಕ್ಷಣವನ್ನು ಪಡೆಯುವುದರಿಂದ ಮಾತ್ರ ಉತ್ತಮ ಬದುಕನ್ನು ನಡೆಸಲು ಸಾಧ್ಯವಿಲ್ಲ, ಶಿಕ್ಷಣದಷ್ಟೇ ಸಂಸ್ಥಾರವು ಮಹತ್ವದ ಅಂಶವಾಗಿದೆ. ಮನುಷ್ಯ ಸಮಾಜಜೀವಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಜೊತೆಗೆ ಮಾನವೀಯತೆ ಆದರ್ಶಗಳನ್ನು, ಮೌಲ್ಯಗಳನ್ನು, ಉದಾತ್ತ ಚಿಂತನೆಗಳಂತಹ ಸಂಸ್ಕಾರಗಳನ್ನು ಕಲಿತಾಗ ಮಾತ್ರ ಬದುಕು ಪರಿಪೂರ್ಣವಾಗಲು ಸಾಧ್ಯ ಎಂದು ವಕೀಲರಾದ ನಾಗರಾಜ ಗುತ್ತೇದಾರ ತಿಳಿಸಿದರು.

ಅವರು ಭಾನುವಾರ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಸಂಕಲ್ಪ ಸ್ನೇಹ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉನ್ನತ ವ್ಯಾಸಂಗ ಮಾಡಿದ ಮಕ್ಕಳು ತಂದೆ-ತಾಯಿ, ಅವಿಭಕ್ತ ಕುಟುಂಬವನ್ನು ತೊರೆದು ವೈಯುಕ್ತಿಕ ಬದುಕನ್ನು ಕಟ್ಟಿಕೊಳ್ಳುತ್ತಿದ್ದು, ಅವಿಭಕ್ತ ಕುಟುಂಬದ ಪರಿಕಲ್ಪನೆ ಮರೆಯಾಗುತ್ತಾ ಮಾನವೀಯ ಮೌಲ್ಯಗಳು ನೆಲೆಯನ್ನು ಕಳೆದುಕೊಳ್ಳುತ್ತಿವೆ, ವಿದ್ಯಾರ್ಥಿಗಳು ಸಂಸ್ಕಾರವಂತರಾಗುವ ಮೂಲಕ ಬದುಕಿನ ಪರಿಪೂರ್ಣತೆಯ ಕಡೆಗೆ ಸಾಗಬೇಕು. ಸಮಾಜದ, ಕುಟುಂಬದ ಹಿರಿಯರು ತಿಳಿಸುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅವರು ಪಡೆದುಕೊಂಡ ಶಿಕ್ಷಣಕ್ಕೆ ಅರ್ಥ ಬರುತ್ತದೆ ಎಂದು ವ್ಯಾಖ್ಯಾನಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಲಕ್ಷ್ಮೀದೇವಿ ಯವರು ಮಹಿಳೆ ಯಾವ ವಿಧದಲ್ಲೂ ಪುರುಷನಿಗೆ ಕಡಿಮೆಯಿಲ್ಲದಂತೆ ಬದುಕು ನಡೆಸಬಲ್ಲಳು, ಅವಳು ಕೀಳರಿಮೆಯಿಂದ ಹೊರಬರಬೇಕಾಗಿದೆ. ವಿದ್ಯಾರ್ಥಿನಿ ಸಾಧನೆಯ ಮೂಲಕ ಸಮಾಜಕ್ಕೆ ಸಮಾನತೆಯ ಸಂದೇಶವನ್ನು ನೀಡಬೇಕು ಎಂದು ತಿಳಿಸುತ್ತಾ, ಸರ್ಕಾರ ಮತ್ತು ಸಮುದಾಯ ಕೊಟ್ಟ ಅವಕಾಶಗಳನ್ನು ಮಹಿಳೆಯರು ಉತ್ತಮವಾಗಿ ಬಳಸಿಕೊಳ್ಳುವ ಮೂಲಕ ಸದೃಢರಾಗಬೇಕು ಎಂದು ಕರೆನೀಡಿದರು.

ಈ ಕಾರ್ಯಕ್ರಮದಲ್ಲಿ ಬಿ.ಕಾಂ ಪದವಿಯಲ್ಲಿ ಶೇ 92.77 ಅಂಕಗಳಿಸಿ ವಿಶ್ವವಿದ್ಯಾಲಯಕ್ಕೆ 3ನೇ ಬ್ಯಾಂಕ್ ಪಡೆದ ಕು. ಸಯ್ಯದ್ ಫಾತೀಮಾ ತಂ. ಸಯ್ಯದ್ ತಾಜುದ್ದೀನ್ ಹಾಗೂ ಶೇ 91.02 ಅಂಕ ಗಳಸಿ 7ನೇ ಬ್ಯಾಂಕ್ ಪಡೆದ ಕು. ತನುಜಾ ಬುಡ್ಡಾಲ ತಂ. ಶ್ರೀನಿವಾಸ ಬುಡ್ಡಾಲ ವಿದ್ಯಾರ್ಥಿನಿಯರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಹೇಮಂತರಾಜ ಕಲ್ಮಂಗಿಯವರು ವಹಿಸಿಕೊಂಡಿದ್ದರು. ಅತಿಥಿಗಳಾಗಿ ಡಾ. ಎಂ.ಆರ್. ಮಂಜುಸ್ವಾಮಿ, ಬಸವರಾಜ ಎಲ್. ಕೇಸರಹಟ್ಟಿ, ಡಾ. ಅಮಿತ್‌ಕುಮಾರ ರೆಡ್ಡಿ, ಸೋಮಶೇಖರ ಕಂಪ್ಲಿ, ಶಂಕರಲಿಂಗಪ್ಪ ಕೊಪ್ಪದ, ಡಾ. ಪಂಡರಿನಾಥ ಅಗ್ನಿಹೋತ್ರಿಯವರು ಪಾಲ್ಗೊಂಡಿದ್ದರು.

error: Content is protected !!