ಕೊಪ್ಪಳ ಜಿಲ್ಲೆಯಲ್ಲಿ ಗೃಹ ಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ಕೊಪ್ಪಳ ಆಗಸ್ಟ್ 30: ಅರ್ಹ ಯಜಮಾನಿ ಮಹಿಳೆಗೆ ಪ್ರತಿ ಮಾಹೆ 2000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಯ ಚಾಲನಾ ಕಾರ್ಯಕ್ರಮ ಆಗಸ್ಟ್ 30ರಂದು ಕೊಪ್ಪಳ ಜಿಲ್ಲೆಯಲ್ಲಿ ಸಹ ಯಶಸ್ವಿಯಾಗಿ ನಡೆಯಿತು.


ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ನಗರದ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಂತೆ ಫಲಾನುಭವಿಗಳಾದ ಗೃಹ ಲಕ್ಷ್ಮಿಯರು ಚಪ್ಪಾಳೆ ತಟ್ಟಿ ಸಂತಷ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಾಭಿವೃದ್ಧಿ ಕೋಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಸಚಿವರು, ಗೃಹ ಲಕ್ಷ್ಮಿ ಯೋಜನೆಯು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.


ಬಿಪಿಎಲ್, ಎಪಿಎಲ್ ಅಂತ್ಯೋದಯ ಕಾರ್ಡ್ ನಲ್ಲಿ ನಮೂದಿಸಿರುವಂತೆ ಕುಟುಂಬದ ಅರ್ಹ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂ.ಗಳನ್ನು ಡಿಬಿಟಿ ಮೂಲಕ ಆರ್ಥಿಕ ಸೌಲಭ್ಯ ನೀಡುವ ಯೋಜನೆ ಇದಾಗಿದೆ. ಕುಟುಂಬದ ಯಜಮಾನಿಯು ಅರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬದ ಸಮಗ್ರ ಅಭಿವೃದ್ಧಿಯನ್ನು ಖಚಿತ ಪಡಿಸಬಹುದಾಗಿದೆ ಹಾಗೂ ಕುಟುಂಬದ ಅಭಿವೃದ್ಧಿ ಸಮಾಜದ ಅಭಿವೃದ್ಧಿಗೆ ಬುನಾದಿಯಾಗಿರುತ್ತದೆ. ಆದ್ದರಿಂದ ಈ ಯೋಜನೆಯು ಮಹಿಳಾ ಸಬಲೀಕರಣ ಹಾಗೂ ಸ್ವಾಭಿಮಾನದ ಹೆಗ್ಗುರುತಾಗಲಿದೆ ಎಂದು ಬಣ್ಣಿಸಿದರು.


ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ 2,78,881 ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇವರಿಗೆ ಪ್ರತಿ ಮಾಹೆಗೆ ಅಂದಾಜು 55 ಕೋಟಿಯಂತೆ ವಾರ್ಷಿಕ 660 ಕೋಟಿ ರೂ.ನಷ್ಟು ಮಹಿಳಾ ಯಜಮಾನಿಯರಿಗೆ ಆರ್ಥಿಕ ಸೌಲಭ್ಯ ಸಿಗಲಿದೆ. ಇದರಿಂದ ಅವರ ಜೀವನದ ಅವಶ್ಯಕ ಸರಾಸರಿ ಬೇಡಿಕೆಗಳನ್ನು ಹೆಚ್ಚಿಸಿ ಹಾಗೂ ಅವರು ವಿವಿಧ ಕ್ಷೇತ್ರಗಳ ಗ್ರಾಹಕರಾಗಿ ಈ ಹಣವನ್ನು ಖರ್ಚು ಮಾಡುವುದರಿಂದ ವಿಶೇಷವಾಗಿ ಗ್ರಾಮೀಣ ಆರ್ಥಿಕ ಅಭಿವೃದ್ಧಿಯೊಂದಿಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ. ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ 2023-24ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ಸರ್ಕಾರವು ಹರ್ಷಿಸುತ್ತದೆ ಎಂದು ಸಚಿವರು ತಿಳಿಸಿದರು.


ನುಡಿದಂತೆ ನಡೆದ ಸರ್ಕಾರ: ಜನತೆಗೆ ಮಾತು ಕೊಟ್ಟಂತೆ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹ ಲಕ್ಷ್ಮಿ ಯಂತಹ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ ಹೆಮ್ಮೆ ನಮಗಿದೆ. ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ ಎಂದು ಸಚಿವರು ತಿಳಿಸಿದರು.


ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ರಾಜ್ಯ ಸರ್ಕಾರದಿಂದ ಜನರಿಗೆ ಒಳ್ಳೆಯ ಯೋಜನೆಗಳು ಸಿಗುತ್ತಿವೆ. ಇದರಿಂದಾಗಿ ಜನತೆಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆ ಬರಲು ಸಾಧ್ಯವಾಗುತ್ತಿದೆ. ಯಾರು ಕೂಡ ಹಸಿವಿನಿಂದ ಬಳಲಬಾರದು ಎಂದು ಅರಿತು ಮುಖ್ಯಮಂತ್ರಿಗಳು ಪುನಃ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ಹೇಳಿದಂತೆ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಕೀರ್ತಿ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯ ಪರಿಪಾಲನಾ ಕಾರ್ಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.


ಗಣ್ಯರು ಭಾಗಿ: ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ವಿತರಣೆಯ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿ, ನೇರ ಪ್ರಸಾರದ ವೇಳೆ ರಾಜ್ಯದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.


ವಿವಿಧೆಡೆ ನೇರ ಪ್ರಸಾರ:
ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಗ್ರಾಮ ಪಂಚಾಯತಿವಾರು 153 ಸ್ಥಳಗಳಲ್ಲಿ ಹಾಗೂ ನಗರ ಸ್ಥಳೀಯ ಪ್ರದೇಶಗಳಲ್ಲಿ 27 ಸ್ಥಳಗಳು ಸೇರಿ ಒಟ್ಟು 180 ಸ್ಥಳಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.


ಸಾಹಿತ್ಯ ಭವನ ಶೃಂಗಾರ: ಕಾರ್ಯಕ್ರಮ ಹಿನ್ನೆಲೆಯಲ್ಲಿ
ಕೊಪ್ಪಳ ಸಾಹಿತ್ಯಭವನವನ್ನು ಅಲಂಕಾರಗೊಳಿಸಲಾಗಿತ್ತು. ಆಸನ, ಕುಡಿಯುವ ನೀರು, ಉಪಹಾರ, ಊಟ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು.


ಗಮನ ಸೆಳೆದ ರಂಗೋಲಿಗಳು: ‘ನಾನೇ ಯಜಮಾನಿ ನಾನೇ ಗೃಹಲಕ್ಷ್ಮಿ’, ‘ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ’ ಎನ್ನುವ ಸಂದೇಶದ ರಂಗೋಲಿಗಳನ್ನು ಸಾಹಿತ್ಯ ಭವನದ ಅಂಗಳದಲ್ಲಿ ಬಿಡಿಸಿದ್ದು ವಿಶೇಷವಾಗಿತ್ತು.
ಗಮನ ಸೆಳೆದ ಸೆಲ್ಫಿ ಸ್ಟ್ಯಾಂಡ್: ‘ನಾನೇ ಯಜಮಾನಿ ನಾನೇ ಗೃಹ ಲಕ್ಷ್ಮಿ’, ‘ಸ್ತ್ರೀ ಸ್ವಾವಲಂಬನೆಯತ್ತ ಒಂದು ದಿಟ್ಟ ಹೆಜ್ಜೆ’, ‘ಸದೃಢ ಮಹಿಳೆ ಸದೃಢ ರಾಷ್ಟ್ರ’ ಹೆಸರಿನ ಸೆಲ್ಪೀ ಸ್ಟ್ಯಾಂಡನಲ್ಲಿ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮತ್ತು ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಲಾಗಿ ನಿಂತು ಫೋಟೋ ತೆಗೆಯಿಸಿಕೊಂಡು ಸಂತಷ ವ್ಯಕ್ತಪಡಿಸಿದರು.


ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ಸುನೀಲ್ ವಂಟಗೋಡಿ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ. ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯರಾಣಿ ಕೆ.ವಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಗಂಗಪ್ಪ, ಕೊಪ್ಪಳ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಯಶ್ರೀ ರಾಜಪುರೋಹಿತ ಹಾಗೂ ಇನ್ನೀತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!