ತುಮಕೂರು: ಕೊಬ್ಬರಿಗೆ 25,000 ಬೆಂಬಲ ಬೆಲೆ ಆಗ್ರಹಿಸಿ ತುಮಕೂರು‌ ಜಿಲ್ಲೆ ಕೊರಟಗೆರೆ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಬಂದ್ ಗೆ ಕರೆ ಕೊಡಲಾಗಿತ್ತು.

ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಗೆ ವರ್ತಕರು ಬೆಂಬಲ ನೀಡಿದ್ದಾರೆ. ರೈತ ಸಂಘಟನೆಗಳಿಂದ ಪ್ರತಿಭಟನಾ ಜಾಥ ನಡೆಯುತ್ತಿದೆ. ಕ್ವಿಂಟಾಲ್ ಕೊಬ್ಬರಿಗೆ 25,000 ಬೆಂಬಲ ಘೋಷಿಸುವಂತೆ ರೈತರ ಆಗ್ರಹಿಸಿದ್ದಾರೆ. ತಹಶೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಬೆಳಿಗ್ಗೆ ಸುಮಾರು ಎರಡು ಗಂಟೆ ಕಾಲ ಪಟ್ಟಣದ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು.

‘ಸರ್ಕಾರ ಕೂಡಲೆ ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಪಡಿಸಬೇಕು. ಕೊರಟಗೆರೆ ತಾಲ್ಲೂಕಿನಲ್ಲಿರುವ ಸಾಗುವಳಿ ಸಮಸ್ಯೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಗಮನ ಹರಿಸಿ, ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ರೈತರು ಒತ್ತಾಯಿಸಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಜಿಲ್ಲಾ ಘಟಕದ ಅಧ್ಯಕ್ಷ ಆನಂದ್‌ ಪಟೀಲ್, ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!