ಗಂಗಾವತಿ: ಗಂಗಾವತಿಯ ನ್ಯಾಯವಾದಿಗಳಾದ ನಾಗರಾಜ ಗುತ್ತೇದಾರರವರು ಗಂಗಾವತಿ ತಾಲೂಕು ಧಾರ್ಮಿಕವಾಗಿ, ಸಾಹಿತ್ಯಿಕವಾಗಿ ಸಾಕಷ್ಟು ಐತಿಹ್ಯವನ್ನು ಹೊಂದಿರುವುದರ ಜೊತೆಗೆ ರಂಗಭೂಮಿ, ದಾಸಸಾಹಿತ್ಯ, ಜಾನಪದ ಸಾಹಿತ್ಯ, ಶರಣ ಸಾಹಿತ್ಯ, ಸೂಫಿ ಸಾಹಿತ್ಯ, ಬಯಲಾಟ, ಚಲನಚಿತ್ರ ಕಲಾವಿದರುಗಳ ಮೂಲಕ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ ಎಂದು ಅಭಿಪ್ರಾಯಪಟ್ಟರು.

ಅವರು ದಿನಾಂಕ: ೩೧.೦೭.೨೦೨೩ ರಂದು ಗಂಗಾವತಿ ನಗರದ ಅಮರ ಚಿತ್ರಮಂದಿರದಲ್ಲಿ ಹರಿದಾಸ ದಾಸಸಾಹಿತ್ಯದ ಶ್ರೇಷ್ಠ ಚಿಂತಕರಾದ ಪ್ರಸನ್ನ ವೆಂಕಟದಾಸರ ಜೀವನಾಧಾರಿತ ಚಲನಚಿತ್ರ “ಶ್ರೀ ಪ್ರಸನ್ನ ವೆಂಕಟದಾಸರು” ಚಲನಚಿತ್ರವು ಯಶಸ್ವಿ ೨೫ನೇ ದಿನದ ಪ್ರದರ್ಶನದ ಅಂಗವಾಗಿ ಏರ್ಪಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು

ಕಳೆದ ದಶಕದಿಂದೀಚೆಗೆ ಭಕ್ತಿಪ್ರಧಾನ ಚಿತ್ರಗಳು ಕರ್ನಾಟಕದಲ್ಲಿ ಕಡಿಮೆಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಮಾತಾಂಬುಜಾ ಮೂವೀಸ್‌ರವರು ಹಿರಿಯ ನಿರ್ದೇಶಕರಾದ ಡಾ. ಮಧುಸೂಧನ್ ಹವಾಲ್ದಾರರವರ ನೇತೃತ್ವದಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದು ಅಭಿನಂದನೆಗೆ ಅರ್ಹವಾದದ್ದು. ಕರ್ನಾಟಕದಲ್ಲಿ ಮೇರುನಟ ಡಾ. ರಾಜಕುಮಾರ್, ಆಂಧ್ರದ ಹೆಸರಾಂತ ನಟ ಎನ್.ಟಿ ರಾಮರಾವ್ ಅವರನ್ನು ಆದರ್ಶವಾಗಿಟ್ಟುಕೊಂಡು ಗಂಗಾವತಿಯ ನಟ ಸಹೋದರ ವಿಷ್ಣುತೀರ್ಥ ಜೋಷಿಯವರು ೮-೯ ಚಿತ್ರಗಳಲ್ಲಿ ಭಕ್ತಿಪ್ರಧಾನ ಪಾತ್ರಗಳಲ್ಲಿ ತನ್ಮಯವಾಗಿ ನಟಿಸುವ ಮೂಲಕ ತಮ್ಮ ಮನೋಜ್ಞ ಅಭಿನಯದಿಂದ ಚಿತ್ರಪ್ರೇಮಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಕೊರೋನಾ ಸಂದರ್ಭದಲ್ಲಿ ಸಹೋದರ ವಿಷ್ಣುತೀರ್ಥರವರು ಲಸಿಕಾಕರಣ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಆಶಾ ಕಾರ್ಯಕರ್ತೆಯರಿಗೆ ಸಹಕರಿಸದ ಪ್ರತಿಫಲವಾಗಿ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರು ಈ ಚಿತ್ರತಂಡಕ್ಕೆ ಶುಭ ಕೋರಿರುವುದು ವಿಶೇಷವಾಗಿದೆ. ಜೊತೆಗೆ ಸ್ಥಳೀಯ ಹಿರಿಯ ನ್ಯಾಯವಾದಿಗಳು, ಉತ್ತಮ ನಟರಾಗಿರುವ ಶರತ್ ದಂಡಿನ್‌ರವರು ಹವ್ಯಾಸ ರಂಗಭೂಮಿ ಕಲಾವಿದರಾದ ನಾಗರಾಜ ಇಂಗಳಗಿಯವರು, ಪಂಪಾಪತಿ ಇಂಗಳಗಿಯವರು ಮತ್ತು ಪತ್ರಕರ್ತರಾದ ರಾಮಮೂರ್ತಿ ನವಲಿಯವರು, ಇತರ ಸ್ಥಳೀಯ ಕಲಾವಿದರು ಈ ಚಿತ್ರದಲ್ಲಿ ನಟಿಸುವ ಮೂಲಕ ಗಂಗಾವತಿಯನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ ಕಾರ್ಯ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ರಾಜವಂಶಸ್ಥೆ ಶ್ರೀಮತಿ ಲಲಿತಾರಾಣಿ ರಂಗದೇವರಾಯಲುರವರು ಭಕ್ತಿಪ್ರಧಾನ ಚಿತ್ರವನ್ನು ನಾಡಿನ ಜನ ವೀಕ್ಷಿಸುವ ಮೂಲಕ ಧಾರ್ಮಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡಿದ್ದಾರೆ. ಚಲನಚಿತ್ರದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೂ ಇನ್ನೂ ಹೆಚ್ಚಿನ ಅವಕಾಶಗಳು ಸಿಗಲಿ ಎಂದು ಹಾರೈಸಿದರು.
ನಟ, ನಿರ್ಮಾಪಕ ವಿಷ್ಣುತೀರ್ಥ ಜೋಷಿಯವರು ಮಾತನಾಡಿ ಭತ್ತದ ಕಣಜ ಗಂಗಾವತಿ ಭಕ್ತಿಗೂ ಕಣಜವಾಗಿ ನಮಗೆ ಹಾರೈಸಿದೆ. ಸ್ಥಳೀಯ ಕಲಾವಿದರಿಗೆ ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ ಎಂದು ಬೆಂಬಲವನ್ನು ಕೋರಿ ಮಾತನಾಡಿದರು.

ಶರತ್ ದಂಡಿನ್ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಪತ್ರಕರ್ತೆ ಶ್ರೀಮತಿ ಸಿ. ಮಹಾಲಕ್ಷ್ಮಿ ಯವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಅತಿಥಿಗಳಾಗಿ ಗಣ್ಯರಾದ ರವೀಂದ್ರನಾಥ, ಜಿಲಾನಿಪಾಷಾ ಖಾದ್ರಿ, ನಗರಸಭೆ ಸದಸ್ಯರಾದ ವಾಸುದೇವರಾವ್ ನವಲಿ, ಆರ್.ಬಿ ಕುಲಕರ್ಣಿ ವಕೀಲರು,ಮಂಜುನಾಥ ಬೈರಿ ವಕೀಲರು, ಆನೆಗೊಂದಿ ಗ್ರಾ.ಪಂ ಮಾಜಿ ಅಧ್ಯಕ್ಷರಾದ ತಿರುಪತೆಪ್ಪ, ರಾಘವೇಂದ್ರ ತೂನಾ, ಆನಂದ ಕುಲಕರ್ಣಿ ಕಾರಟಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
error: Content is protected !!