ಉಚಿತ ಗ್ಯಾಸ್ ವಿತರಿಸುವುದು ಹಾಗೂ ಅಂಜನಾದ್ರಿ ಪ್ರದೇಶದ ಪರಿಸರ ರಕ್ಷಣೆ ಮಾಡಲು ಒತ್ತಾಯ.- ಬಸವರಾಜ ಮ್ಯಾಗಳಮನಿ

ಗಂಗಾವತಿ: ಕರ್ನಾಟಕ ಸರ್ಕಾರವು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಜನಪರ, ಬಡವರಪರ ಕಾಳಜಿ ಇರುವ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಪ್ರತಿ ಕುಟುಂಬಕ್ಕೂ ಪ್ರತಿ ತಿಂಗಳ ಒಂದು ಗ್ಯಾಸ್ ವಿತರಿಸುವ ಯೋಜನೆಯನ್ನು ಜಾರಿಗೆ ತಂದು ಆರು ಗ್ಯಾರಂಟಿಗಳ ಸರದಾರರಾಗಿ ಸಿಕ್ಸರ್ ಸಿದ್ದು ಎಂಬ ಖ್ಯಾತ ಹೊಂದಲಿ, ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮುಖ್ಯಮಂತ್ರಿಯವರಿಗೆ ಒತ್ತಾಯಿಸಿದ್ದಾರೆ.

ಶಕ್ತಿ ಯೋಜನೆಯಿಂದ ಅನೇಕ ಮಹಿಳೆಯರು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಇದರಿಂದ ಸರ್ಕಾರಕ್ಕೆ ಅಪಾರವಾದ ನಷ್ಟವುಂಟಾಗಿದೆ. ಈ ಯೋಜನೆಗೆ ಷರತ್ತು ವಿಧಿಸಿ, ಅಂದರೆ ವಾಸಸ್ಥಳದಿಂದ ಸುಮಾರು ೧೫೦-೨೦೦ ಕಿ.ಮೀ ರವರೆಗೆ ಮಾತ್ರ ಉಚಿತ ಪ್ರಯಾಣ ಸೀಮಿತಗೊಳಿಸಿ, ಇದರಿಂದ ಉಳಿತಾಯವಾಗುವ ಹಣಕಾಸನ್ನು ಉಚಿತ ಗ್ಯಾಸ್‌ಗಾಗಿ ಬಳಸಿಕೊಂಡು ಎಲ್ಲರಿಗೂ ಪ್ರತಿ ತಿಂಗಳು ಒಂದು ಗ್ಯಾಸ್ ಸಿಲಿಂಡರ್ ಉಚಿತವಾಗಿ ನೀಡಲು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ವಿಷಯವಾಗಿ ಸರ್ಕಾರ ಹಾಗೂ ಚುನಾಯಿತ ಪ್ರತಿನಿಧಿಗಳು ಸಾಕಷ್ಟು ಮುತುವರ್ಜಿವಹಿಸುತ್ತಿರುವುದು ಸಂತೋಷದ ಸಂಗತಿ. ಅಂಜನಾದ್ರಿ ಬೆಟ್ಟದ ಸುತ್ತಲೂ ಎರಡು ಕಿ.ಮೀ ಅಂತರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕಟ್ಟಡಗಳನ್ನು ಮಾಡಲು ಅನುಮತಿ ನೀಡಬೇಕು. ಎರಡು ಕಿ.ಮೀ ಒಳಗಡೆ ವಾಹನಗಳ ಪಾರ್ಕಿಂಗ್, ಯಾತ್ರಿ ನಿವಾಸ, ವಸತಿ, ವಾಣಿಜ್ಯ ಸೇರಿದಂತೆ ಯಾವುದೇ ಉದ್ದೇಶಗಳಿಗೆ ಅನುಮತಿ ನೀಡಬಾರದು. ರೈತರ ಜಮೀನುಗಳನ್ನು ರೈತರಿಗಾಗಿಯೇ ಮೀಸಲಿರಿಸಿ, ಯಾವುದೇ ಪ್ರಭಾವಕ್ಕೆ ಒಳಗಾಗದೇ ಕೃಷಿಗಾಗಿಯೇ ಈ ಭೂಮಿಯನ್ನು ಉಪಯೋಗಿಸಬೇಕು. ಈಗಿರುವ ನೈಸರ್ಗಿಕ ಸೌಂದರ್ಯವನ್ನು ವಿರೂಪಗೊಳಿಸಬಾರದು. ನೈಸರ್ಗಿಕ ಪರಿಸರಕ್ಕೆ ಧಕ್ಕೆಯುಂಟಾದಲ್ಲಿ ಸ್ಥಳೀಯ ಸಂಘ-ಸAಸ್ಥೆಗಳು, ಜನಪ್ರತಿನಿಧಿಗಳು, ಮುಖಂಡರು, ಯುವಕರು, ಪ್ರಗತಿಪರರೊಂದಿಗೆ ಹೋರಾಟ ಮಾಡಬೇಕಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡದೇ ಅಂಜನಾದ್ರಿ ಬೆಟ್ಟ ಪ್ರದೇಶದ ಪರಿಸರ ಸೌಂದರ್ಯವನ್ನು ಉಳಿಸಿ ಬೆಳೆಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

error: Content is protected !!