ಬಳ್ಳಾರಿ:ಪ್ರತಿ ಕುಟುಂಬದ ಆರೋಗ್ಯ ಸ್ಥಿತಿಗತಿಗಳನ್ನು ಗುರುತಿಸಿ ಸಮುದಾಯದ ಉನ್ನತಿಗಾಗಿ ಸರಕಾರದ ಯೋಜನೆಗಳನ್ನು ಅನುಷ್ಟಾನ ಮಾಡಲು ಹಮ್ಮಿಕೊಂಡ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆಗೆ ಸಾರ್ವಜನಿಕರು ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ತಿಳಿಸಿದರು.
ಬಳ್ಳಾರಿ ತಾಲೂಕಿನ ಸಿಂಗದೇವನಹಳ್ಳಿ ಕ್ಯಾಂಪ್‍ನಲ್ಲಿ ಶುಕ್ರವಾರದಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ಜರಗುತ್ತಿದ್ದ ಸಮೀಕ್ಷೆಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ಸರಕಾರದ ಸೂಚನೆಯಂತೆ ರಾಜ್ಯಾದ್ಯಂತ ಸಮೀಕ್ಷೆ ನಡೆಯುತ್ತಿದ್ದು, ಬಳ್ಳಾರಿ ಜಿಲ್ಲೆಯಲ್ಲೂ ಸಮೀಕ್ಷೆ ಜರುಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಕುಟುಂಬದಲ್ಲಿಯ ಆರೋಗ್ಯದ ವಿಷಯಗಳಾದ ಗರ್ಭಿಣಿ ಮಹಿಳೆಯರಲ್ಲಿ ರಕ್ತ ಹೀನತೆ, ಹೆಚ್ಚಿನ ಅಪಾಯದ ಗರ್ಭಧಾರಣೆ, ಕುಟುಂಬ ಯೋಜನೆ ವಿಧಾನಗಳ ಅಳವಡಿಕೆ, ಮಾನಸಿಕ ಆರೋಗ್ಯ, ಕುಟುಂಬಗಳಲ್ಲಿನ ಅನುವಂಶಿಕ ಕಾಯಿಲೆಗಳ ಪರಿಶೀಲನೆ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯದ ವಿವರದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎಂದರು.
ಈ ಪೂರ್ವದಲ್ಲಿ ಮಹಿಳೆಯರ ಹೆರಿಗೆ ಮಾಡಿಸಿದ ಸ್ಥಳ ಹಾಗೂ ಆಯ್ಕೆ ವಿವರ, ಮಕ್ಕಳ ಶಾಲಾ ವಿವರ, ಕಿಶೋರಿಯರ ಆರೋಗ್ಯ ಮಾಹಿತಿ, ಋತುಚಕ್ರ ಮತ್ತು ವೈಯಕ್ತಿಕ ಶುಚಿತ್ವ, ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ಕುಷ್ಟರೋಗ, ಅಸಾಂಕ್ರಾಮಿಕ ರೋಗಗಳಾದ ಸಕ್ಕರೆ ಕಾಯಿಲೆ, ಮಧುಮೇಹ, ಕ್ಯಾನ್ಸರ್, ಪಾಶ್ರ್ವವಾಯು, ಮುಂತಾದ ರೋಗಗಳ ವಿವರ ಹಾಗೂ ಈ-ಸಂಜೀವಿನಿ ಓಪಿಡಿ ಆ್ಯಪ್ ಬಳಕೆ, ಚಿಕಿತ್ಸೆ ಪಡೆಯಲು ಬಯಸುವ ಆಸ್ಪತ್ರೆ ವಿವರ ಹಾಗೂ ಕುಟುಂಬದ ಪೌಷ್ಟಿಕ ಆಹಾರ ಸೇವನೆಯ ಪ್ರಮಾಣ ಮತ್ತು ಗುಣಮಟ್ಟ ಆಹಾರ ಪದ್ಧತಿ ಹಾಗೂ ಆಹಾರ ಸೇವನೆಯ ವಿಧಾನ ಕುರಿತು ಸಮಿಕ್ಷೆಯ ಸಮಯದಲ್ಲಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರೇಷ್ಮಾ, ಸಹಾಯಕ ಸಾಂಖೀಕ ಅಧಿಕಾರಿ ಡಾ.ರಾಘವೇಂದ್ರ ಶಾನಭೊಗರ, ಸಮುದಾಯ ಆರೋಗ್ಯ ಅಧಿಕಾರಿ ಭರತ್, ಆರೋಗ್ಯ ನಿರೀಕ್ಷಣಾಧಿಕಾರಿ ಮೃತ್ಯುಂಜಯ, ವೀರೇಶ್, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಸಿದ್ದಮ್ಮ, ಜಯಶ್ರೀ ಹಾಗೂ ಆಶಾ ಕಾರ್ಯಕರ್ತೆಯರಾದ ಪರಿಮಳ, ಪ್ರತ್ಯುಷ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
