ಗಂಗಾವತಿ: ಜನರನ್ನು ಒದ್ದು, ಕಚ್ಚಿ ಗಾಯಗೊಳಿಸಿದ್ದ ಕರಿ ಕೋತಿಯನ್ನು ಸ್ಥಳೀಯರ ನೆರವಿನೊಂದಿಗೆ ಬೋನ್ ಇರಿಸಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ತಾಲೂಕಿನ ಹನುಮನಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಒದ್ದು ಮತ್ತು ಕಚ್ಚಿ ಗಾಯಗೊಳಿಸಿ ತೊಂದರೆ ನೀಡುತ್ತಿದ್ದ ಕರಿ ಕೋತಿನ್ನು ಸೆರೆಹಿಡಿಯುವಂತೆ ಹನುಮನಹಳ್ಳಿ ಗ್ರಾಮಸ್ಥರು, ತಾಲೂಕು ಆಡಳಿತ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಜೂ.2 ರ ಶುಕ್ರವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹನುಮನಹಳ್ಳಿ ಗ್ರಾಮದ ಊರಮ್ಮನ ಗುಡಿಯ ಬಳಿ ಬೋನನ್ನು ಇರಿಸಿ ಬೋನಿನಲ್ಲಿ ಬಾಳೆಹಣ್ಣು ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನು ಹಾಕಿ ಕೋತಿಯನ್ನು ಹುಡುಕಿ ಓಡಿಸಿ ಬಂದು ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕರಿಕೋತಿ ಹನುಮನಹಳ್ಳಿ ಗ್ರಾಮದ ಹಲವು ಜನರನ್ನು ಒದ್ದು ಮತ್ತು ಕಚ್ಚಿ ತೀವ್ರ ಗಾಯಗೊಳಿಸಿತ್ತು. ಇವರೆಲ್ಲ ಗಂಗಾವತಿ ಮತ್ತು ಆನೆಗೊಂದಿ ಪ್ರದೇಶದ ಸರ್ಕಾರಿ ಹಾಗೂ ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ಗ್ರಾಮದ ಜನರು ಕೂಡಲೇ ಕರಿ ಕೋತಿಯನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆ ಮನವಿ ಪತ್ರ ಸಲ್ಲಿಸಿದರು. ಇದರಂತೆ ಅರಣ್ಯ ಇಲಾಖೆಯ ನಾಗರಾಜ್, ಚಂದ್ರಶೇಖರ್, ಮೌಲಪ್ಪ ಮತ್ತು ಪಿ ಡಿ ಓ ಬಸವರಾಜ್ ಗೌಡ ನಾಯಕ ನೇತೃತ್ವದಲ್ಲಿ ಸ್ಥಳೀಯ ಜನರ ಸಹಕಾರದಲ್ಲಿ ಶುಕ್ರವಾರ ಬೆಳಗ್ಗೆ ಕೋತಿಯನ್ನು ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋತಿಯನ್ನು ಮೇಲಾಧಿಕಾರಿಗಳ ಸೂಚನೆ ಮೇರೆಗೆ ಬೇರೆ ಕಡೆ ಬಿಡಲಾಗುತ್ತದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ನಾಗರಾಜ್ ಕಾಲಚಕ್ರ ಗೆ ತಿಳಿಸಿದ್ದಾರೆ.