ಕುಷ್ಟಗಿ: ಬಾಲಕನಿಗೆ ಪೂರ್ಣ ಟಿಕೆಟ್‌ ಪಡೆಯುವ ವಿಚಾರದಲ್ಲಿ ಈಶಾನ್ಯ ಸಾರಿಗೆ ಸಿಬ್ಬಂದಿ ಹಾಗೂ ಪ್ರಯಾಣಿಕನ ಮಧ್ಯೆ ಗುರುವಾರ ಹೊಡೆದಾಟ ನಡೆದಿದೆ.

ಪಟ್ಟಣದ ಬಸ್‌ ನಿಲ್ದಾಣದಲ್ಲಿ ಗುರುವಾರ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ನಿರ್ವಾಹಕ ಮುತ್ತಣ್ಣ ಪೂಜಾರ ಗಾಯಗೊಂಡಿದ್ದಾರೆ.

ಅವರಿಗೆ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬ ಚಾಲಕ ಬಸಯ್ಯ ಬೇವನೂರಮಠ ಅವರಿಗೂ ಸಣ್ಣ ಗಾಯಗಳಾಗಿದ್ದು ಇಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಚಾಲಕ ಬಸಯ್ಯ ಎಂಬುವವರು ನೀಡಿದ ದೂರಿನ ಅನ್ವಯ ಪ್ರಯಾಣಿಕರಾದ ಯಮನೂರಪ್ಪ ಕಂದಗಲ್‌, ಪರಸಪ್ಪ ರಂಗೋಲಿ ಮತ್ತು ಶಶಿಧರ ಗದ್ದಿ ಅವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆಗೆ ಸಂಬಂಧಿಸಿದ ವಿವಿಧ ಐಪಿಸಿ ಕಲಂಗಳಲ್ಲಿ ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಆಗಿದ್ದೇನು?: ಇಳಕಲ್‌ದಿಂದ ಪಟ್ಟಣಕ್ಕೆ ಬರುತ್ತಿದ್ದ ಬಸ್‌ಗೆ ದೋಟಿಹಾಳ ಗ್ರಾಮದಲ್ಲಿ ಏರಿದ ಆರೋಪಿಯೊಬ್ಬರ ಜೊತೆಯಲ್ಲಿ ಬಾಲಕನಿದ್ದ. ಆತನಿಗೂ ಪೂರ್ಣ ಮೊತ್ತದ ಟಿಕೆಟ್‌ ಪಡೆಯುವಂತೆ ನಿರ್ವಾಹಕ ಹೇಳಿದ್ದಾರೆ. ಆದರೆ, ಮಗು ಚಿಕ್ಕದಿದೆ ಎಂದು ವ್ಯಕ್ತಿ ವಾದಿಸಿದ್ದಾರೆ. ಬಾಲಕನ ಬಾಯಿಂದ ಮಾಹಿತಿ ಪಡೆದ ನಿರ್ವಾಹಕ ಪೂರ್ಣಪ್ರಮಾಣದ ಟಿಕೆಟ್ ಪಡೆಯಲು ಒತ್ತಾಯಿಸಿದಾಗ ವ್ಯಕ್ತಿ ಮತ್ತೆ ನಿರಾಕರಿಸಿದ್ದಾನೆ. ಆಗ ಇಬ್ಬರ ನಡುವೆ ಬಸ್‌ನಲ್ಲೇ ಮಾತಿನ ಚಕಮಕಿ ನಡೆದಿದೆ.

ನಂತರ ಬಸ್‌ ಕುಷ್ಟಗಿ ಬಸ್‌ ನಿಲ್ದಾಣ ತಲುಪಿದಾಗಲೂ ಜಗಳ ಮುಂದುವರಿದಿದ್ದು, ಅಲ್ಲಿ ಸಾರಿಗೆ ಇಲಾಖೆ ಇತರೆ ಸಿಬ್ಬಂದಿ ಸ್ಥಳಕ್ಕೆ ಬಂದು ಆರೋಪಿಯಾಗಿರುವ ವ್ಯಕ್ತಿಯೊಬ್ಬನನ್ನು ಥಳಿಸಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಬಸ್‌ ನಿಲ್ದಾಣದಲ್ಲಿ ಬಹಳಷ್ಟು ಜನರು ಜಮಾಯಿಸಿದ್ದ ಗೊಂದಲದ ವಾತಾವರಣ ಉಂಟಾಗಿತ್ತು. ಘಟನೆ ಬೆಳಿಗ್ಗೆ ನಡೆದಿದ್ದು ಸಾರಿಗೆ ಸಿಬ್ಬಂದಿ ಸಂಜೆ ದೂರು ನೀಡಿದ ನಂತರ ಪ್ರಕರಣ ದಾಖಲಾಗಿದೆ.

ಈ ಮಧ್ಯೆ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಗಾಯಗೊಂಡು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

error: Content is protected !!