ಡಬಲ್ ಬಿಲ್ಲಿಂಗ್, ಒಂದೇ ಕಾಮಗಾರಿಗೆ ಬೇರೆ ಬೇರೆ ಕಂಪನಿಗಳಿಂದ ಬಿಲ್ಲಿಂಗ್, ಕಮಿಷನ್ ಧಂದೆ ಇನ್ನು ಮುಂದೆ ನಡೆಯಲ್ಲ. ಒಂದು ವೇಳೆ ನಡೆದಿದ್ದರೆ ಅಂತಹ ವಿವರಗಳ ಪಟ್ಟಿಯನ್ನು 10 ದಿನದಲ್ಲಿ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ದಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸೋಮವಾರ ಮಧ್ಯಾಹ್ನ ಬಿಬಿಎಂಪಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಬೆಂಗಳೂರು ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ಈ ವೇಳೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಕಳೆದ ಮೂರು ವರ್ಷಗಳಿಂದ ಬೆಂಗಳೂರಲ್ಲಿ ವಿಧಾನಸಭೆ ಕ್ಷೇತ್ರವಾರು ಆಗಿರುವ ಕೆಲಸ, ಯಾವ ಯೋಜನೆಯಡಿ ಆ ಕೆಲಸ ಆಗಿದೆ, ಅದಕ್ಕೆ ಆಗಿರುವ ಖರ್ಚು ವಿವರ, ಕೆಲಸ ಆಗಿರುವ ಬಗ್ಗೆ ಫೋಟೋ, ವಿಡಿಯೋ ಮತ್ತಿತರ ದಾಖಲೆಗಳನ್ನು ಒದಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬಿಬಿಎಂಪಿ ಅನುದಾನ ಪಡೆದು ಶುರು ಮಾಡದ ಕೆಲಸ, ಕಾಮಗರಿಗಳನ್ನು ಯತಾಸ್ಥಿತಿಯಲ್ಲಿ ತಡೆ ಹಿಡಿಯಬೇಕು. ಕಾಲಮಿತಿಯೊಳಗೆ ಪೂರ್ಣಗೊಳಿಸದ ಯೋಜನೆ ಕೆಲಸಗಳನ್ನು ತಡೆ ಹಿಡಿಯಬೇಕು ಎಂದು ಅವರು ಹೇಳಿದರು.

ಯಾವ, ಯಾವ ಕಾಮಗಾರಿಗೆ ಕೆಲಸ ಆಗದಿದ್ದರೂ ಬಿಲ್ ಮಾಡಲಾಗಿದೆ, ಒಂದೇ ಕಾಮಗಾರಿಗೆ ಎರಡೆರಡು ಬಿಲ್ ಮಾಡಲಾಗಿದೆ, ಒಂದೇ ಕಾಮಗಾರಿಗೆ ಎರಡು ಕಂಪನಿಗಳಿಂದ ಬಿಲ್ ಆಗಿದೆ ಎಂಬ ಬಗ್ಗೆ ತನಿಖೆ ಮಾಡಿ 10 ದಿನದೊಳಗೆ ಪಟ್ಟಿ ನೀಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದರು.

ಅಧಿಕಾರಿಗಳ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚಿ ನೋಡುತ್ತೇನೆ. ನೀವು ಪಟ್ಟಿ ಕೊಡದಿದ್ದರೆ ನಾನೇ ನಿಮಗೆ ಪಟ್ಟಿ ಕೊಡುತ್ತೇನೆ. ನಾನು ಹಳ್ಳಿಯಿಂದ ಬಂದಿದ್ದರೂ ನನಗೆ ಈ ಬಗ್ಗೆ ಮಾಹಿತಿ ಕೊಡುವವರು ಇದ್ದಾರೆ. ಮಾಹಿತಿ ಪಡೆಯುವ ಶಕ್ತಿಯೂ ನನಗಿದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ರಸ್ತೆ ಮತ್ತಿತರ ಕಾಮಗಾರಿಗಳನ್ನು ಏಜೆನ್ಸಿಗಳ ಮೂಲಕವೇ ಮಾಡುವುದಾದರೆ ಪಾಲಿಕೆಯಲ್ಲಿ ಎಂಜಿನಿಯರ್ ಗಳು ಇರುವುದರ ಔಚಿತ್ಯವಾದರೂ ಏನು? ನಿಮ್ಮ ಕೆಲಸವನ್ನು ಬೇರೆ ಯಾರೋ ಮಾಡುವುದಾದರೆ ನೀವು ಇರುವುದಾದರೂ ಏಕೆ? ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೊರವಲಯದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಅವಕಾಶ ಕಲ್ಪಿಸಬಾರದು. ಹಾಗೇ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ದಂಡ ಮತ್ತಿತರ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಸೂಚಿಸಿದರು.

ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಯಲು ತಡೆಯಾಗಿರುವ ಬಾಟಲ್ ನೆಕ್ ಸ್ಥಳಗಳನ್ನು ಗುರುತಿಸಿ, ಸರಿಪಡಿಸಿ. ಮಳೆ ನೀರು ಸಮಸ್ಯೆಯಿಂದ ನಮಗೆ ಮತ್ತು ನಿಮಗಿಂತ ಹೆಚ್ಚಾಗಿ ಬೆಂಗಳೂರಿಗೇ ಕೆಟ್ಟ ಹೆಸರು ಬರುತ್ತಿದೆ. ಇದನ್ನು ನಿವಾರಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು. ಬಿಬಿಎಂಪಿ ಸಮುದ್ರ ಇದ್ದಂತೆ. ಎಲ್ಲಿ ತೆಲುತ್ತೇವೆಯೋ, ಎಲ್ಲಿ ಮುಳುಗುತ್ತೇವೆಯೋ ಗೊತ್ತಿಲ್ಲ ಎಂದು ಅವರು ಹೇಳಿದರು.

ಆಡಳಿತಕ್ಕೆ ಚುರುಕು ಮುಟ್ಟಿಸಲು ಒಂದಷ್ಟು ಬದಲಾವಣೆ ಮಾಡುತ್ತೇವೆ. ಶಿಕ್ಷಿಸುವುದು ದೊಡ್ಡ ಕೆಲಸ ಅಲ್ಲ. ಅದಕ್ಕೆ ಆಸ್ಪದ ಕೊಡಬೇಡಿ. ಒಳ್ಳೆ ಕೆಲಸ ಮಾಡಿ. ಒಳ್ಳೆ ಹೆಸರು ಪಡೆಯಿರಿ. ಸರಕಾರಕ್ಕೆ ಒಳ್ಳೆ ಹೆಸರು ತನ್ನಿ. ಹಿಂದಿನ ಸರಕಾರದ ಅವಧಿಯಲ್ಲಿ ಯಾರ್ಯಾರಿಗೋ ಬೂತ್ ಲೆವೆಲ್ ಆಫೀಸರ್ ಅಂತ ಲೆಟರ್ ಕೊಟ್ರಲ್ಲ, ನಿಮಗೆ ಬುದ್ದಿ ಇರಲಿಲ್ಲವಾ? ಯಾರ್ಯಾರು ಏನೇನೂ ಮಾಡಿದರು, ಎಷ್ಟೆಷ್ಟು ಭ್ರಷ್ಟಾಚಾರ ಮಾಡಿದರು ಅಂತ ಗೊತ್ತಿದೆ. ಈಗ ಬದಲಾವಣೆ ಮಾಡಿಕೊಳ್ಳಿ. ಈ ಸರಕಾರ ಬದಲಾವಣೆ ತಂದಿದೆ ಎಂದು ಜನರಿಗೆ ಮನವರಿಕೆ ಆಗುವಷ್ಟರ ಮಟ್ಟಿಗೆ ಉತ್ತಮವಾಗಿ ಕೆಲಸ ಮಾಡಿ. ನಿಮ್ಮ ಹಾಗೂ ಸರಕಾರದ ಗೌರವ ಉಳಿಸಿ ಎಂದು ಅವರು ಸಲಹೆ ನೀಡಿದರು.

error: Content is protected !!