ಕೋಪ್ಪಳ: ಮುಟ್ಟಿನ ಬಗ್ಗೆ ಇಂದಿಗೂ ಅನೇಕ ಮಹಿಳೆಯರು ಸಾಂಪ್ರದಾಯಿಕ ಮೂಢನಂಬಿಕೆಯನ್ನು ಅನುಸರಿಸುತ್ತಿರುವುದನ್ನು ಹೋಗಲಾಡಿಸಲು ವೈಜ್ಞಾನಿಕವಾಗಿ ಅರಿವು ಮೂಡಿಸುವ ಕಾರ್ಯಕ್ರಮ ವ್ಯಾಪಕವಾಗಬೇಕಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೋಟಗಾರ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮುಟ್ಟಿನ ನೈರ್ಮಲ್ಯ ನಿರ್ವಹಣೆ ಕುರಿತು ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳ ಬಗ್ಗೆ ನಾವು ಕಾಳಜಿ ವಹಿಸಬೇಕಾಗಿದೆ. ಅನುಕೂಲಕರವಾದ ವಾತಾವರಣವನ್ನು ಒದಗಿಸಿಕೊಡಬೇಕಾಗಿದೆ. ಮುಟ್ಟಿನ ಬಗ್ಗೆ ಅನಗತ್ಯವಾದ ನಡಾವಳಿಗಳು ಹೆಣ್ಣು ಮಕ್ಕಳ ಮಾನಸಿಕ ವೇದನೆಗೆ ಎಡೆಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಅನುಸರಿಸಬೇಕಾದ ಕೆಲ ಸಲಹೆ ಸೂಚನೆಗಳನ್ನು ಒದಗಿಸುವುದು ಹಾಗೂ ಈ ಕುರಿತು ಹೆಚ್ಚಿನ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಅಮೀನ್ ಅತ್ತಾರ್ ಮಾತನಾಡಿ, ಮುಟ್ಟಿನ ನೈರ್ಮಲ್ಯ ನಿರ್ವಹಣೆಯ ಸ್ಥಿತಿಯ ಕುರಿತ ಅಧ್ಯಯನದ ವರದಿಯ ಶಿಫಾರಸ್ಸುಗಳ ಅನುಷ್ಠಾನಕ್ಕೆ ಪರಿಶೀಲನೆ ನಡೆಸಲಾಗುವುದು. ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಸುಮಾರು 171 ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ್ದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಜ್ಯೋತಿ ಗೊಂಡಬಾಳ ಮಾತನಾಡಿ, ವರದಿಯು ಸದ್ಯದ ವಾಸ್ತವ ಚಿತ್ರಣವನ್ನು ಎತ್ತಿ ತೋರಿಸುತ್ತಿದೆ. ಇದರ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು.

ಸಹಜ ಟ್ರಸ್ಟ್ ನ ಶೀಲಾ ಹಾಲ್ಕುರಿಕೆ ಮಾತನಾಡಿ, ಶಾಲೆಯಲ್ಲಿ ಯಾವುದಾದರೂ ಒಂದು ಮಗುವಿಗೆ ಸಮಸ್ಯೆಯಾದರೆ, ಅದು ಎಲ್ಲಾ ಮಕ್ಕಳಿಗೂ ಸಂಬಂಧಿಸಿದ ಸಮಸ್ಯೆಯೆಂದು ನಾವು ತಿಳಿಯಬೇಕು ಎಂದು ಮುಟ್ಟಿನ ಸಮಸ್ಯೆಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.

ಹಾಯಕ ಆಯುಕ್ತ ಬಸವೆಣ್ಣಪ್ಪ ಕಲ್‍ಶೆಟ್ಟಿ ಅವರು ವರದಿ ಬಿಡುಗಡೆಗೊಳಿಸಿದರು. ವಿಸ್ತಾರ್ ಸಂಸ್ಥೆಯ ಸಹಾಯಕ ನಿರ್ದೇಶಕಿ ಆಶಾ ವಿ. ಮಾತನಾಡಿದರು. ಮಾಹಿತಿ ಸಂಗ್ರಹಕಾರರಾದ ಶಿವಲೀಲಾ ಮತ್ತು ಶ್ರೀಮತಿ ಅನುಸೂಯ ಮೇಟಿಯವರು ತಮ್ಮ ಸವಾಲುಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಎಸ್.ಎ.ಗಫಾರ್. ಯೇಸುಫ್ ಡಿ.ಜೆ; ಇಮಾಮ್ ಗುಳೇದಗುಡ್ಡ. ಸಮಗ್ರ ಶಿಕ್ಷಣಾ ಶಾಲೆಯ ಸಿಬ್ಬಂದಿ ಹಾಜರಿದ್ದರು. ಶೋಭಾ ನಿರೂಪಿಸಿ ವಂದಿಸಿದರು

error: Content is protected !!