
ನವಲಗುಂದ: 200 ಯುನಿಟ್ ವಿದ್ಯುತ್ ಉಚಿತವೆಂದು ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಅವರ ಭಾವಚಿತ್ರವಿರುವ ನಕಲಿ ವಿದ್ಯುತ್ ಬಿಲ್ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಬಿಲ್‌ನ ಮೇಲ್ಭಾಗದಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರ ಹಾಗೂ ‘ಗೃಹ ಜ್ಯೋತಿ’ ವಿದ್ಯುತ್ ಸರಬರಾಜು ನಿಗಮ ನಿಯಮಿತ ಎಂದು ಮುದ್ರಿಸಲಾಗಿದೆ.
ಬಿಲ್‌ನಲ್ಲಿ 200 ಯುನಿಟ್ ವಿದ್ಯುತ್ ಬಳಸಿರುವುದನ್ನು ತೋರಿಸಲಾಗಿದ್ದು, ಬಿಲ್ ಮೊತ್ತ- 00 ಎಂದು ಮುದ್ರಿಸಲಾಗಿದೆ. ಕೊನೆಯಲ್ಲಿ ‘ನಿಮ್ಮ ವಿದ್ಯುತ್ ಬಿಲ್ ಇನ್ನು ನಮ್ಮ ಜವಾಬ್ದಾರಿ’ ಎನ್ನುವ ಒಕ್ಕಣಿಕೆ ಇದೆ. ಕಾಂಗ್ರೆಸ್‌ನ ಹಸ್ತದ ಚಿಹ್ನೆ ಕೂಡ ಇದರಲ್ಲಿದೆ.
ಗೃಹ ಜ್ಯೋತಿ ಸೇರಿದಂತೆ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಚುನಾವಣಾ ಪ್ರಚಾರದ ವೇಳೆ ನೀಡಿತ್ತು. ಚುನಾವಣೆಯಲ್ಲಿ ಬಹುಮತ ಪಡೆದು, ಶನಿವಾರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ನಕಲಿ ವಿದ್ಯುತ್ ಬಿಲ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.