ಕೋಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಜನಾರ್ದನ ರೆಡ್ಡಿ 8268 ಮತಗಳಿಂದ ಗೆಲುವಿನ ಗೋಲು ಹೊಡೆದಿದ್ದಾರೆ.

ರೆಡ್ಡಿ ಒಟ್ಟು 65791 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ 57674 ಹಾಗೂ‌ ಬಿಜೆಪಿಯ ಪರಣ್ಣ ಮುನವಳ್ಳಿ 29918 ಮತಗಳನ್ನು ಗಳಿಸಿದರು.

ರೆಡ್ಡಿ ‘ಆಪ‍ರೇಷನ್‌ ಕೆಆರ್‌ಪಿಪಿ’ ಮೂಲಕ ನಗರಸಭೆಯ ಸದಸ್ಯರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರು. ರೆಡ್ಡಿ ಪ್ರಚಾರ, ತಂತ್ರ ಹಾಗೂ ಪ್ರತಿತಂತ್ರ ಜೋರಾಗುತ್ತಿದ್ದಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ‘ಸ್ಥಳೀಯರಿಗೆ ಮಣೆ ಹಾಕಿ’ ಎಂದರು. ಆದರೆ ಮತದಾರರು ರೆಡ್ಡಿಗೆ ಬಹುಮತ ನೀಡಿದ್ದಾರೆ.

ರೆಡ್ಡಿ ಹಿಂದೆ ವಿಧಾನಪರಿಷತ್‌ ಸದಸ್ಯರಾಗಿ ಪ್ರವಾಸೋದ್ಯಮ ಸಚಿವರಾಗಿದ್ದರು. ಹೀಗಾಗಿ ಜನರಿಂದ ಆಯ್ಕೆ ಬಯಸಿ ಎದುರಿಸಿದ ಮೊದಲ ಚುನಾವಣೆ ಇದಾಗಿತ್ತು. ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಅನ್ಸಾರಿ ಅವರು ರೆಡ್ಡಿಗೆ ಪ್ರಬಲ ಎದುರಾಳಿಗಳಾಗಿದ್ದರು.

ರೆಡ್ಡಿ, ವಸತಿ ರಹಿತ ಬಡವರಿಗೆ ಎರಡು ಬೆಡ್‌ರೂಮ್‌ ಗಳ ಮನೆ, ಸ್ವಂತ ಹಣದಲ್ಲಿ ಅಂಜನಾದ್ರಿಯನ್ನು ಅಭಿವೃದ್ಧಿ ಹಾಗೂ ಉತ್ತಮ ರಸ್ತೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು.

ರೆಡ್ಡಿ 2022ರ ಡಿಸೆಂಬರ್‌ನಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡಿ ಗಂಗಾವತಿಯನ್ನು ತಮ್ಮ ಪಕ್ಷದ ಕೇಂದ್ರಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ ಇಲ್ಲಿಯೇ ಮನೆ ಖರೀದಿಸಿದ್ದಾರೆ. ಅವರ ಪಕ್ಷದ ಚಿಹ್ನೆಯಾದ ಫುಟ್‌ಬಾಲ್‌ ಕೂಡ ಎದುರಾಳಿಗಳ ಟೀಕೆಗೆ ಪ್ರಮುಖ ಅಸ್ತ್ರವಾಗಿ ಬದಲಾಗಿತ್ತು. ‘ಎಲ್ಲರನ್ನೂ ಫುಟ್‌ಬಾಲ್‌ ಆಡುವೆ’ ಎನ್ನುವುದು ರೆಡ್ಡಿಯ ಪ್ರಚಾರದ ಸರಕಾಗಿತ್ತು. ಎದುರಾಳಿಗಳೂ ಈ ಚೆಂಡನ್ನು ‘ವಾಪಸ್‌ ಓಡಿಸುತ್ತೇವೆ’ ಎಂದಿದ್ದರು. ಇಷ್ಟು ದಿನ ನಡೆದ ಪ್ರಚಾರದ ಭರಾಟೆಯಲ್ಲಿ ಮಾತಿನ ಎಟು, ಎದಿರೇಟು ನಡೆದರೂ ಮತ ಎಣಿಕೆ ‘ಫೈನಲ್‌’ನಲ್ಲಿ ‘ಗೆಲುವಿನ ಗೋಲು’ ಹೊಡೆದರು.

ಹಾಲಿ ಶಾಸಕರಿಗೆ ಸೋಲು

ಹಾಲಿ ಶಾಸಕ ಪರಣ್ಣ 2008ರಲ್ಲಿ 2,885 ಮತ್ತು 2018ರಲ್ಲಿ 7,973 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಮೂರನೆ ಸ್ಥಾನ ಗಳಿಸಿದರು.

ಬಿಜೆಪಿ ತನ್ನ ಅಭ್ಯರ್ಥಿ ಗೆಲುವಿಗೆ

ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ಮಾಡಿದ್ದ ನಾಯಕರು ಅಂಜನಾದ್ರಿ ವಿಷಯವನ್ನು ಮುಂದಿಟ್ಟು ಹಿಂದೂತ್ವದ ಮಂತ್ರ ಪಠಿಸಿದ್ದರು. ಆದ್ದರಿಂದ ಬಸನಗೌಡ ಪಾಟೀಲ ಯತ್ನಾಳ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕ್ಷೇತ್ರಕ್ಕೆ ಕರೆಯಿಸಿ ಪ್ರಚಾರ ಮಾಡಿಸಿದ್ದರು. ದೆಹಲಿ ಶಾಸಕ ಅಜಯ್‌ ಮಹಾವರ್‌ ಗಂಗಾವತಿ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಒಂದು ತಿಂಗಳು ಕ್ಷೇತ್ರದಲ್ಲಿಯೇ ಮೊಕ್ಕಾಂ ಹೂಡಿದ್ದರು.

ಅನ್ಸಾರಿಗೆ ಎರಡನೇ ಸ್ಥಾನ:

ಇಕ್ಬಾಲ್‌ ಅನ್ಸಾರಿ 2004ರಲ್ಲಿ ಹಾಗೂ 2013ರಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದರು. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಈ ಬಾರಿ ಅವರು ಎರಡನೇ ಸ್ಥಾನ ಪಡೆದುಕೊಂಡರು.

error: Content is protected !!