
ಕೊಪ್ಪಳ ಮೇ 12: ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಮೇ 13ರಂದು ನಡೆಯುವ ಮತ ಎಣಿಕೆಗೆ ಅಗತ್ಯ ಸಂಖ್ಯೆಯಲ್ಲಿ ಅಧಿಕಾರಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜೊತೆಗೆ ಇನ್ನೀತರ ಕಡೆಗಳಲ್ಲಿ ಸಹ ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿ ಸಿಬ್ಬಂದಿಯನ್ನು ನಿಯೋಜಿಸಿ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರು ತಿಳಿಸಿದರು.
ಮೇ 12ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತ ಮಾತನಾಡಿದರು.
*ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ನಿಯೋಜನೆ:* ಮತ ಎಣಿಕೆ ಭದ್ರತೆಗೆ 3 ಡಿವೈಎಸ್ಪಿ, 8 ಪಿಐ, 26 ಪಿಎಸ್‌ಐ, 46 ಎಎಸ್‌ಐ, 203 ಹೆಚ್.ಸಿ/ಪಿಸಿ, 28 ಡಬ್ಲ್ಯೂ.ಹೆಚ್.ಸಿ/ಡಬ್ಲ್ಯೂಪಿಸಿ, 135 ಗೃಹರಕ್ಷಕ ದಳ, 2 ಸಿಎಪಿಎಫ್, 3 ಡಿಎಆರ್, 2 ಕೆ.ಎಸ್.ಆರ್.ಪಿ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.
*ಜಿಲ್ಲೆಯ ಇನ್ನಿತರೆ ಸ್ಥಳಗಳಲ್ಲಿ ಬಂದೋಬಸ್ತ್:* ಮತ ಎಣಿಕೆ ದಿನದಂದು ಜಿಲ್ಲೆಯ ಇನ್ನಿತರೆ ಸ್ಥಳಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಗಂಗಾವತಿ ನಗರ, ಗಂಗಾವತಿ ಗ್ರಾಮೀಣ, ಕನಕಗಿರಿ, ಕಾರಟಗಿ, ಕುಷ್ಟಗಿ ಹಾಗೂ ಯಲಬುರ್ಗಾ ಒಳಗೊಂಡಂತೆ ಒಟ್ಟು 4 ಪಿಐ, 10 ಪಿಎಸ್‌ಐ, 14 ಎಎಸ್‌ಐ, 140 ಸಿ.ಹೆಚ್.ಸಿ/ಡಬ್ಲ್ಯೂ.ಹೆಚ್.ಸಿ ಹಾಗೂ ಸಿಪಿಸಿ/ಡಬ್ಲ್ಯೂಪಿಸಿ, 65 ಗೃಹರಕ್ಷಕ ದಳ, 6 ಡಿಎಆರ್, 3 ಕೆ.ಎಸ್.ಆರ್.ಪಿ ಅಧಿಕಾರಿಗಳ, ಸಿಬ್ಬಂದಿಗಳು ಕಾರ್ಯನಿರ್ವಹಿಸುವರು.
ಜಿಲ್ಲೆಯಾದ್ಯಾಂತ ಒಟ್ಟು ಮತ ಎಣಿಕೆ ಬಂದೋಬಸ್ತ್ ಕುರಿತು 3 ಡಿವೈಎಸ್ಪಿ, 12 ಪಿಐ, 36 ಪಿಎಎಸ್‌ಐ, 60 ಎಎಸ್‌ಐ, 371 ಸಿ.ಹೆಚ್.ಸಿ/ಡಬ್ಲ್ಯೂ.ಹೆಚ್.ಸಿ ಹಾಗೂ ಸಿಪಿಸಿ/ಡಬ್ಲ್ಯೂಪಿಸಿ, 200 ಗೃಹರಕ್ಷಕ ದಳ, 9 ಡಿಎಆರ್, 5 ಕೆ.ಎಸ್.ಆರ್.ಪಿ ಹಾಗೂ 2 ಸಿಎಪಿಎಫ್ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
*ಪಾರ್ಕಿಂಗ್ ಮಾರ್ಗಸೂಚಿ:* ಮತ ಎಣಿಕೆಗೆ ಆಗಮಿಸುವ ಸಾರ್ವಜನಿಕರು ಹಾಗೂ ಕಾರ್ಯಕರ್ತರ ವಾಹನಗಳ ಪಾರ್ಕಿಂಗ್‌ಗೆ ಕೊಪ್ಪಳ ಎ.ಪಿ.ಎಂ.ಸಿ ಆವರಣದಲ್ಲಿ ಸ್ಥಳ ಕಲ್ಪಿಸಿದೆ. ಅಭ್ಯರ್ಥಿಗಳು, ಎಜೆಂಟರು, ಮತ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ/ಸಿಬ್ಬಂದಿಯವರಿಗೆ ಬಿ.ಬಿ.ಎಂ ಕಾಲೇಜು ಆವರಣದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಗಂಗಾವತಿ ಕಡೆಯಿಂದ ಆಗಮಿಸುವ ವಾಹನಗಳಿಗೆ ಡಾಲರ್ ಕಾಲೋನಿಯಲ್ಲಿ ವಾಹನ ಪಾರ್ಕಿಂಗ್ ಕಲ್ಪಿಸಿದೆ. ಹಾಲವರ್ತಿ/ಎನ್.ಹೆಚ್. ಬೈಪಾಸ್, ಯಲಬುರ್ಗಾ ಮತ್ತು ಗೊಂಡಬಾಳ ಕಡೆಯಿಂದ ಆಗಮಿಸುವ ವಾಹನಗಳಿಗೆ ಗವಿಸಿದ್ದೇಶ್ವರ ಮಠದ ಹಿಂಭಾಗದ ಜೈಲು ರಸ್ತೆ ಕಡೆಗೆ ಪಾರ್ಕಿಂಗ್ ಕಲ್ಪಿಸಿದೆ. ಸ್ಟ್ರಾಂಗ್ ರೂಂ ಮುಂಭಾಗ ಗಂಜ್ ಸರ್ಕಲ್‌ನಿಂದ ಗವಿಮಠ ಕಡೆಗೆ ತೆರಳುವ ರಸ್ತೆ, ಸ್ಟ್ರಾಂಗ್ ರೂಂ ಹಿಂಭಾಗದ ಹಾಗೂ ಎಡಗಡೆ ರಸ್ತೆಗಳಲ್ಲಿ ಯಾವುದೇ ವಾಹನಗಳಿಗೆ ಓಡಾಡಲು ಅನುಮತಿ ಇರುವುದಿಲ್ಲಾ, ಈ ರಸ್ತೆಗಳನ್ನು ನೋ ಮ್ಯಾನ್ ಝೋನ್ ಅಂತಾ ಗುರುತಿಸಲಾಗಿದೆ.
ಗಂಜ್ ಸರ್ಕಲ್‌ದಿಂದ ಗವಿಮಠ ಕಡೆಗೆ ತೆರಳುವ ಎಲ್ಲಾ ವಾಹನಗಳು ಮೇ 13ರ ಬೆಳಿಗ್ಗೆ 5 ರಿಂದ ಸಂಜೆ 5 ಗಂಟೆಯವರೆಗೆ ಅಶೋಕ ವೃತ್ತದ ಮೂಲಕ ಸಂಚರಿಸಬೇಕು ಎಂದು ಅವರು ಹೇಳಿದರು.
ಮತ ಎಣಿಕೆಗೆ ಪಕ್ಷಗಳಿಂದ ನಿಯೋಜನೆಗೊಂಡಿರುವ ವಿವಿಧ ರಾಜಕೀಯ ಪಕ್ಷಗಳ ಏಜೆಂಟ್‌ರು ತಮಗೆ ಚುನಾವಣಾಧಿಕಾರಿಗಳು ನೀಡಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕು.
ಮತ ಎಣಿಕೆ ಕೇಂದ್ರದೊಳಗೆ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದವರಿಗೆ ಮಾತ್ರ ಪ್ರವೇಶ ಕಲ್ಪಿಸಿದೆ.
ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್, ನೀರಿನ ಬಾಟಲ್, ಸಿಗರೇಟ್, ಬೆಂಕಿ ಪೊಟ್ಟಣ, ಎಲ್ಲಾ ತರಹದ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಜಿಲ್ಲೆಯಾದ್ಯಾಂತ ಮೇ 12ರ ಸಂಜೆ 5 ರಿಂದ ಮೇ 13ರ ರಾತ್ರಿ 11 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಸಾರ್ವಜನಿಕರು ಆದೇಶದನ್ವಯ ಗುಂಪು ಸೇರುವುದು, ವಿಜಯೋತ್ಸವ ನಡೆಸುವುದು ನಿಷೇಧವಿರುತ್ತದೆ.
ಮತ ಎಣಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ವಿವಿಧ ರಾಜಕೀಯ ಪಕ್ಷಗಳ ಏಜೆಂಟ್‌ರು ಸ್ವಂತ ತಮ್ಮ ವಾಹನ ಚಲಾಯಿಸಿಕೊಂಡು ಬಂದಲ್ಲಿ ಗವಿಸಿದ್ದೇಶ್ವರ ಮಹಿಳಾ ಹಾಸ್ಟೇಲ್ ಆವರಣದಲ್ಲಿ ವಾಹನಗಳ ಪಾರ್ಕಿಂಗ್ ಅವಕಾಶ ಇರುತ್ತದೆ. ಚಾಲಕರೊಂದಿಗೆ ಆಗಮಿಸಿದಲ್ಲಿ ವಾಹನವನ್ನು ಎ.ಪಿ.ಎಂ.ಸಿನಲ್ಲಿ ಸೃಜಿಸಿರುವ ಪಾರ್ಕಿಂಗ್ ಹತ್ತಿರ ತೆಗೆದುಕೊಂಡು ಹೋಗಬೇಕು ಎಂದು ಎಸ್ಪಿ ಅವರು ಪತ್ರಿಕಾಗೋಷ್ಠಿಯ ಮೂಲಕ ಜಿಲ್ಲೆಯ ಸಾರ್ವಜನಕರಿಗೆ ಮಾಹಿತಿ ನೀಡಿದರು.