
ಕೊಪ್ಪಳ ಮೇ 11 : ವಿಧಾನಸಭಾ ಚುನಾವಣೆಯ ಮತ ಯಂತ್ರಗಳನ್ನು ಇಡಲಾದ ಕೊಠಡಿಗಳಿಗೆ ಅಗತ್ಯ ಭದ್ರತೆಯನ್ನು ಕಲ್ಪಿಸಲಾಗಿದ್ದು, ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಸ್ಟ್ರಾಂಗ್ ರೂಂ ಇರುವ ಕಟ್ಟಡಕ್ಕೆ ಮೂರು ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ತಿಳಿಸಿದ್ದಾರೆ.
ಮೇ.10ರಂದು ಮತದಾನ ನಡೆದು ಮುಕ್ತಾಯವಾದ ಬಳಿಕ ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ 1322 ಮತಗಟ್ಟೆಗಳಲ್ಲಿನ ಮತಗಟ್ಟೆ ಸಿಬ್ಬಂದಿಯು ಮತಯಂತ್ರಗಳನ್ನು ಮತ್ತು ಪೂರಕ ದಾಖಲಾತಿಗಳನ್ನು ಆಯಾ ವಿಧಾನಸಭಾ ಕ್ಷೇತ್ರವಾರು ಸ್ಥಾಪಿಸಲಾಗಿರುವ ಡಿ-ಮಸ್ಟರಿಂಗ್ ಕೇಂದ್ರಗಳಿಗೆ ನಿಗದಿತ ರೂಟ್ ಮೂಲಕ ತರಲಾಗಿದೆ.
ನಂತರ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳ ತಂಡವು ಮತಗಟ್ಟೆವಾರು ಮತಯಂತ್ರಗಳು ಮತ್ತು ದಾಖಲಾತಿಗಳ ಪರಿಶೀಲನೆ ನಡೆಸಿರುತ್ತಾರೆ. ಪರಿಶೀಲನೆಯ ನಂತರ ವಿಧಾನಸಭಾ ಕ್ಷೇತ್ರವಾರು ಮತಯಂತ್ರಗಳನ್ನು ಕಂಟೈನರ್‌ಗಳ ಮೂಲಕ ಅಗತ್ಯ ಪೊಲೀಸ್ ಎಸ್ಕಾರ್ಟ್ ಮತ್ತು ಸೂಕ್ತ ಭದ್ರತೆಯೊಂದಿಗೆ ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಂ ಗೆ ಸಾಗಿಸಲಾಗಿದೆ.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಮತಯಂತ್ರಗಳನ್ನು 2 ಕೊಠಡಿಗಳಲ್ಲಿ ಹಾಗೂ ಉಳಿದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ತಲಾ ಒಂದು ಪ್ರತ್ಯೇಕ ಕೊಠಡಿಗಳಲ್ಲಿ ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕರು, ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಇರಿಸಿ ಕೊಠಡಿಯನ್ನು ಮುಚ್ಚಿ ಸೀಲ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.