
ಕಲಬುರಗಿ: ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡುವ ಉದ್ದೇಶದಿಂದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ವೇತನ ಸಹಿತ ರಜೆ ನೀಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದ್ದರೂ ಅದನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ತಾಲ್ಲೂಕಿನ ಅಲಗೂಡ ಗ್ರಾಮದಲ್ಲಿರುವ ಬಜಾಜ್ ಅರ್ಥ್ ಪ್ರೈವೇಟ್ ಲಿಮಿಟೆಡ್ ಕಂಪನಿ ವ್ಯವಸ್ಥಾಪಕರಿಗೆ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
‘ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಮತಾಧಿಕಾರ ಇರುವ ಯಾವುದೇ ಉದ್ಯೋಗಿಗೂ ಸಂಸ್ಥೆ ಚುನಾವಣೆ ದಿನದಂದು ಕೆಲಸಕ್ಕೆ ಬರುವಂತೆ ಹೇಳುವಂತಿಲ್ಲ. ನಿಮ್ಮ ಸಂಸ್ಥೆಯಲ್ಲಿ ಈ ಅವಕಾಶವನ್ನು ನಿರಾಕರಿಸಿರುವ ಬಗ್ಗೆ ಮಾಹಿತಿ ಬಂದಿದ್ದು, ಕೂಡಲೇ ಎಲ್ಲ ಉದ್ಯೋಗಿಗಳಿಗೆ ರಜೆ ನೀಡಬೇಕು. ರಜೆ ನೀಡಿರುವ ಕುರಿತು ಲಿಖಿತ ಸಮಜಾಯಿಷಿ ನೀಡಬೇಕು’ ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.