
ಸಮಾಜದ ಹಿತದೃಷ್ಟಿಯಿಂದ ಮಾದಕ ದ್ರವ್ಯ ಕಳ್ಳಸಾಗಣೆದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಸರಿಯಲ್ಲ ಎಂದು ನ್ಯಾ.ಎಂ.ಜಿ ಉಮಾ ಅವರಿದ್ದ ಏಕಸದಸ್ಯ ಪೀಠ ಆದೇಶ ನೀಡಿದೆ.
ಬೆಂಗಳೂರು: ಆರೋಪಿಯೊಬ್ಬರ ವೈಯಕ್ತಿಕ ಹಕ್ಕಿಗಿಂತಲೂ ಸಮಾಜದ ಹಿತದೃಷ್ಟಿ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮಾದಕ ದ್ರವ್ಯಗಳ ಕಳ್ಳಸಾಗಣೆ ಮಾಡುತ್ತಿದ್ದ ಕೀನ್ಯಾ ದೇಶದ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿತು.
ಮಾದಕ ದ್ರವ್ಯ ಮತ್ತು ಉದ್ದೀಪನ ಮದ್ದು ಕಾಯಿದೆ (ಎನ್‌ಡಿಪಿಎಸ್) 1985ರ ಅಡಿ ಸ್ಥಾಪನೆಯಾಗಿರುವ ವಿಶೇಷ ಕೋರ್ಟ್‌ನಲ್ಲಿ 1,300ಕ್ಕೂ ಅಧಿಕ ಪ್ರಕರಣ ಬಾಕಿ ಇದೆ. ಅವುಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದು ಅಸಾಧ್ಯ ಎಂದು ಪೀಠ ಹೇಳಿತು.
ವಿದೇಶಿ ಮಾರ್ಗಗಳ ಮೂಲಕ ದೇಶದಲ್ಲಿ ಮಾದಕ ದ್ರವ್ಯಗಳ ಸಾಗಣೆಗೆ ಪ್ರಯತ್ನಿಸುತ್ತಿರುವ ಆಧಾರದ ಮೇಲೆ ಬಂಧನಕ್ಕೊಳಗಾಗಿದ್ದ ಕೀನ್ಯಾ ಪ್ರಜೆ ಎಮ್ಯಾನುಯಲ್ ಮೈಕೆಲ್ ಜಾಮೀನು ಅರ್ಜಿ ತಿರಸ್ಕರಿಸಿರುವ ನ್ಯಾ.ಎಂ.ಜಿ.ಉಮಾ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಪ್ರಕಟಿಸಿತು. ಭಾರತೀಯ ಸಂವಿಧಾನದ 21ನೇ ವಿಧಿಯಡಿ ಆರೋಪಿಗೆ ಜಾಮೀನು ಪಡೆಯುವ ಹಕ್ಕಿರುತ್ತದೆ. ಅದರಂತೆ ವಿಚಾರಣಾಧೀನ ನ್ಯಾಯಾಲಯದ ಮುಂದಿರುವ 1,308 ಪ್ರಕರಣಗಳಲ್ಲಿ ಬಹುತೇಕ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕಾಗುತ್ತದೆ. ಆದರೆ ಅದು ನಾಗರಿಕ ಸಮಾಜದ ದೃಷ್ಟಿಯಂದ ಒಳ್ಳೆಯದಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಸಮಾಜದ ಹಿತದೃಷ್ಟಿಯಿಂದ ಇಂತಹ ಮಾದಕ ದ್ರವ್ಯ ಕಳ್ಳಸಾಗಣೆದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಸರಿಯಲ್ಲ. ಆರೋಪಿಯ ವೈಯಕ್ತಿಕ ಹಕ್ಕಿಗಿಂತ ಸಮಾಜದ ಹಿತವೇ ಮುಖ್ಯವಾಗುತ್ತದೆ. ಆರೋಪಿ ವಿರುದ್ಧ ಮೇಲ್ನೋಟಕ್ಕೆ ಪ್ರಾಸಿಕ್ಯೂಷನ್ ಸಾಕಷ್ಟು ಸಾಕ್ಷ್ಯಗಳನ್ನು ಸಲ್ಲಿಸಿದೆ. ಹಾಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಎನ್‌ಡಿಪಿಎಸ್ ಆರೋಪಿಗಳು ಸಮಾಜಕ್ಕೆ ಒಂದು ರೀತಿಯ ಪಿಡುಗಿದ್ದಂತೆ. ಇದರ ಪರಿಣಾಮ ಅಗಾಧ. ಹಾಗಾಗಿ ಇಂತಹ ಪ್ರಕರಣಗಳಲ್ಲಿ ಆರೋಪಿಗೆ ಸಂವಿಧಾನ ಬದ್ಧವಾಗಿ ಲಭ್ಯವಿರುವ ವೈಯಕ್ತಿಕ ಹಕ್ಕಿಗಿಂತ ಸಮಾಜದ ಹಿತ ಮುಖ್ಯ. ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಆದೇಶಿಸಿದೆ.
2023ರ ಏ.1ರವರೆಗೆ ಎನ್‌ಡಿಪಿಎಸ್ ವಿಶೇಷ ಕೋರ್ಟ್ ಮುಂದೆ 1308 ಪ್ರಕರಣಗಳಿವೆ. ಅವುಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವುದು ಮಾನವೀಯವಾಗಿ ಸಾಧ್ಯವಿಲ್ಲ. ಈ ಪ್ರಕರಣಗಳಲ್ಲಿ ಸುದೀರ್ಘ ಸಾಕ್ಷಿಗಳ ವಿಚಾರಣೆ ನಡೆಯಬೇಕಾಗುತ್ತದೆ. ಅದೇ ರೀತಿ ಆರೋಪಿಗಳ ಪಾಟೀ ಸವಾಲು ಕೂಡ ಸಾಕಷ್ಟು ಸಮಯ ಹಿಡಿಯುತ್ತದೆ. ಜತೆಗೆ ಪ್ರಕರಣದ ಮೆರಿಟ್ ಮೇಲೆ ಎರಡೂ ಕಡೆ ವಾದ-ಪ್ರತಿವಾದ ಆಲಿಸಬೇಕಾಗುತ್ತದೆ. ಕೆಲವೇ ತಿಂಗಳುಗಳಲ್ಲಿ ಅಂತಹ ಪ್ರಕರಣಗಳನ್ನು ಕಲವೇ ತಿಂಗಳುಗಳಲ್ಲಿ ಇತ್ಯರ್ಥಪಡಿಸುವುದು ಅಸಾಧ್ಯವಾದ ಕಾರ್ಯ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಪ್ರಕರಣದ ಹಿನ್ನೆಲೆ: ಎಮ್ಯಾನುಯಲ್ ಮೈಕೆಲ್ ಎಂಬ ಆರೋಪಿ 2020ರ ಡಿಸೆಂಬರ್‌ನಲ್ಲಿ ಮಾದಕ ದ್ರವ್ಯ ಕಳ್ಳ ಸಾಗಾಣೆ ಆರೋಪದಲ್ಲಿ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ. ಅಂದಿನಿಂದ ಆತ ನ್ಯಾಯಾಂಗ ಬಂಧನಲ್ಲಿದ್ದಾನೆ. 2022ರ ನವೆಂಬರ್‌ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಆಲಿಸಿದ ಹೈಕೋರ್ಟ್, ಮೂರು ತಿಂಗಳಲ್ಲಿ ಆರೋಪಿ ಜಾಮೀನು ಅರ್ಜಿಯನ್ನು ವಿಲೇವಾರಿ ಮಾಡುವಂತೆ ವಿಚಾರಣಾ ಕೋರ್ಟ್‌ಗೆ ಸೂಚನೆ ನೀಡಿತ್ತು. ವಿಚಾರಣಾ ಕೊರ್ಟ್ ಮತ್ತಷ್ಟು ಸಮಯಾವಕಾಶ ಕೋರಿತ್ತು. ಈ ನಡುವೆ ಆರೋಪಿ ಹೈಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ.