ಸಾಮಾನ್ಯವಾಗಿ ಪ್ರತಿ ವರ್ಷ ಎಸ್​​ಎಸ್​​ಎಲ್​ಸಿ ಫಲಿತಾಂಶ ಬಂದ ನಂತರ ಎಲ್ಲರನ್ನೂ ಕಾಡುವ ಪ್ರಶ್ನೆ ಮುಂದೆ ಏನು? ವಿದ್ಯಾರ್ಥಿಗಳು, ಪಾಲಕರು, ಬಂಧು ಬಳಗದವರು ಎಲ್ಲರೂ ಈ ಪ್ರಶ್ನೆ ಹಿಡಿದುಕೊಂಡು ಆ ಮಕ್ಕಳ ಹಿಂದೆ ಬೀಳುತ್ತಾರೆ. ನೀನು ಆ ಕೋರ್ಸ್ ತಗೋ, ಇಲ್ಲ ನಾನು ಹೇಳಿದ್ದು ತೆಗೆದುಕೊಂಡ್ರೆ ಇದರಲ್ಲಿ ಬಾರಿ ಸ್ಕೋಪ್ ಇದೆ ಎಂದು ಪದೇಪದೆ ಕೇಳಿ ಮಕ್ಕಳಲ್ಲಿ ದ್ವಂದ್ವ ಸೃಷ್ಟಿಮಾಡಿ, ಆ ಮಕ್ಕಳಿಗೆ ಏನು ಬೇಕು ಎನ್ನುವುದನ್ನೇ ಮರೆಸಿ ಬಿಡುತ್ತಾರೆ.

ಆದರೆ, ಕೋರ್ಸ್ ತಗೆದುಕೊಳ್ಳುವುದರಿಂದ ಹಿಡಿದು ಅವರ ಮುಂದಿನ ಭವಿಷ್ಯದ ನಿರ್ಮಾತೃಗಳು ಅವರೇ ಆಗಿರುತ್ತಾರೆ. ಅದು ಅವರ ಹಕ್ಕೂ ಹೌದು. ಶಿಕ್ಷಕರ ಮತ್ತು ಪಾಲಕರ ಜವಾಬ್ದಾರಿ ಎಂದರೆ ವಿದ್ಯಾರ್ಥಿಯ ಆಸಕ್ತಿ ಮತ್ತು ಸಾಮರ್ಥ್ಯವನ್ನು ಅರಿತು ಸಲಹೆಯನ್ನು ನೀಡಿ ಅವರ ಆಸಕ್ತಿಯ ವಿಷಯವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ಕೊಟ್ಟು ಪ್ರೇರೇಪಿಸಬೇಕು ಅಷ್ಟೆ. ಅದೇ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡುತ್ತಿದ್ದೇವೆ.

ಎಸ್ಸೆಸ್ಸೆಲ್ಸಿ ನಂತರ ಏನು?

ಸೈನ್ಸ್ (ವಿಜ್ಞಾನ ವಿಭಾಗ)

ವಿಜ್ಞಾನದ ವಿಷಯದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಈ ವಿಭಾಗವನ್ನು ಆರಿಸಿಕೊಂಡರೆ ಭವಿಷ್ಯದಲ್ಲಿ ಅವರಿಗೆ ಹೆಚ್ಚು ಆಯ್ಕೆಗಳು ಲಭ್ಯವಾಗುತ್ತದೆ. ಉದಾ: ಇಂಜಿನಿಯರಿಂಗ್, ವೈದ್ಯಕೀಯ, ಬಿ.ಫಾರ್ಮಾ, ಬಿ.ಟೆಕ್, ಆರ್ಕಿಟೆಕ್ಚರ್, ರೊಬೋಟಿಕ್ಸ್, ಏರೋನಾಟಿಕ್ಸ್… ಹೀಗೆ ಅನೇಕ ವಿಷಯಗಳ ಮೇಲೆ ತಮ್ಮ ಪದವಿಯನ್ನು ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಪದವಿಪೂರ್ವ ಕೋರ್ಸ್‌ಗಳಿವೆ. PCMB, PCMC, PCME, PCMH, PCMG, CBPH ಯಾವ ಯಾವ ಕೋರ್ಸ್‌ಗಳು ಯಾವ ಕಾಲೇಜಿನಲ್ಲಿ ಲಭ್ಯವಿದೆ ಎಂದು ನೋಡಿ ಬೇಕಿರುವ ವಿಷಯ ಆರಿಸಿಕೊಳ್ಳಬಹುದಾಗಿದೆ.

ಕಾಮರ್ಸ್(ವಾಣಿಜ್ಯ ವಿಭಾಗ)

ವಾಣಿಜ್ಯ ವಿಭಾಗವೂ ಕೂಡ ವಿಜ್ಞಾನದಷ್ಟೇ ಬಾರಿ ಬೇಡಿಕೆ ಇರುವ ವಿಷಯವಾಗಿದೆ. ಕಾರಣ ಇಲ್ಲಿಯೂ ಕೂಡ ಹಲವಾರು ಉದ್ಯೋಗಾವಕಾಶವಿದೆ. ಉದಾ: ಸಿ.ಎ, ಸಿ.ಎಸ್, ಬ್ಯಾಂಕಿಂಗ್, ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್, ಚಾರ್‌ಟೆಡ್ ಫೈನಾನ್ಶಿಯಲ್ ಅನಲಿಸ್ಟ್, ಕಾಸ್ಟ್ ಅಕೌಂಟೆಂಟ್, ಮ್ಯಾನೇಜ್ಮೆಂಟ್ ಇನ್ನೂ ಅನೇಕ ವೃತ್ತಿಗಳ ಆಯ್ಕೆ ಅವರಿಗಿದೆ. ವಿದ್ಯಾರ್ಥಿಗಳಿಗೆ ಕಾಮರ್ಸ್ ವಿಷಯಕ್ಕೆ ಸಂಬಂಧಪಟ್ಟಂತೆ ಪದವಿಪೂರ್ವ ಕೋರ್ಸ್‌ಗಳಿವೆ- H.E.B.A, C.E.B.A, S.E.B.A, E.G.B.A, B.A.B.S, B.A.P.E, B.A.E.B, B.A.Cs.S ಹೀಗೆ ಅನೇಕ ಕೋರ್ಸ್‌ಗಳಿವೆ.

ಆಟ್ಸ್ (ಕಲಾ ವಿಭಾಗ)

ಆರ್ಟ್ಸ್ ಎಂದರೆ ಅತೀ ಕಡಿಮೆ ಅಂಕ ಬಂದವರು ಸೇರುವ ಕೊರ್ಸ್ ಎಂಬ ಹಣೆಪಟ್ಟಿ ಈಗ ಸಂಪೂರ್ಣ ದೂರವಾಗಿದೆ. ಕಾರಣ ಈ ಕೋರ್ಸ್ ಆಯ್ಕೆ ಮಾಡಿದರೆ ರಾಜ್ಯ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಐ.ಎ.ಎಸ್, ಕೆ.ಎ.ಎಸ್, ಎಫ್.ಡಿ.ಸಿ, ಎಸ್.ಡಿ.ಸಿ, ಐ.ಪಿ.ಎಸ್, ಜತೆಗೆ ಅನೇಕ ವಿಶ್ವವಿದ್ಯಾಲಯಗಳಲ್ಲಿ, ಶಿಕ್ಷಣ ಇಲಾಖೆಗಳಲ್ಲಿ ಅವರಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ. ಕಲೆ ಮತ್ತು ಭಾಷೆಯ ವಿಷಯದಲ್ಲಿ ಆಸಕ್ತಿ ಇರುವವರು ಈ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಕಲಾ ವಿಷಯಕ್ಕೆ ಸಂಬಂಧಪಟ್ಟಂತೆ ಪದವಿಪೂರ್ವ ಕೋರ್ಸ್‌ಗಳಿವೆ- ಉದಾ: H.E.P.S, H.E.G.P, H.E.B.A, H.E.L.P, H.P.ED.E, H.P.ED.G, H.E.P.K ಪತ್ರಿಕೋದ್ಯಮ, ಡಿಸೈನಿಂಗ್, ಸೋಶಿಯಲ್ ವರ್ಕ್ ಹೀಗೆ ಹಲವು ಕ್ಷೇತ್ರದಲ್ಲಿ ಮುಂದುವರಿಯಬಹುದು.

ಡಿಪ್ಲೊಮ ಕೋರ್ಸ್‌ಗಳು

ಮೇಲಿನ ಮೂರು ಸಾಂಪ್ರದಾಯಿಕ ಕೋರ್ಸ್‌ಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳಿಗೆ ಅವರವರ ಆಸಕ್ತಿಗನುಸಾರ ಡಿಪ್ಲೊಮಾ ಜೊತೆಗೆ ಅನೇಕ ಸರ್ಟಿಫಿಕೇಟ್ ಕೋರ್ಸ್‌ಗಳು ಲಭ್ಯವಿದೆ. ವಿದ್ಯಾರ್ಥಿಗಳು ತಮ್ಮ ಓದನ್ನು ಮುಂದುವರಿಸಲು ಇಚ್ಚಿಸಿದ್ದಲ್ಲಿ, ಡಿಪ್ಲೊಮಾ ನಂತರ ಇಂಜಿನಿಯರಿಂಗ್ ಕೂಡ ಮಾಡಬಹುದು, ಹೀಗೆ ಮಾಡಿದ್ದಲ್ಲಿ ಎಂಜಿನಿಯರಿಂಗ್‌ನಲ್ಲಿ ಒಂದು ವರ್ಷ ಕೂಡ ಉಳಿಯುತ್ತದೆ. ಈ ವರ್ಷದಿಂದ ಮೊದಲ ಬಾರಿ ಕರ್ನಾಟಕದಲ್ಲಿ ಡಿಪ್ಲೊಮಾ ಪರೀಕ್ಷೆಯನ್ನು ಕನ್ನಡ, ಇಂಗ್ಲಿಷ್, ಕನ್ನಡ ಮತ್ತು ಇಂಗ್ಲಿಷ್ ಅಲ್ಲಿ ಪರೀಕ್ಷೆ ಬರೆಯುವ ಅವಕಾಶವಿದೆ. ಡಿಪ್ಲೊಮಾವನ್ನು ಪಿಯುಸಿಗೆ ತತ್ಸಮ ಎಂದು ಆದೇಶಿಸಲಾಗಿದೆ. ಡಿಪ್ಲೊಮಾದಂತೆಯೇ ಪ್ಯಾರಾಮೆಡಿಕಲ್ ಡಿಪ್ಲೊಮಾ ಕೋರ್ಸ್‌ಗಳು ಹೀಗಿವೆ.

ಡಿಪ್ಲೊಮಾ ಕೋರ್ಸ್‌ಗಳು

ಡಿಪ್ಲೊಮಾ ಇನ್ ಇಂಜಿನಿಯರಿಂಗ್,

ಹೋಟೆಲ್ ಮ್ಯಾನೇಜ್‌ಮೆಂಟ್

ಜರ್ನಲಿಸಮ್

ಎಜುಕೇಷನ್

ಫೋಟೋಗ್ರಫಿ

ಸೈಕಾಲಜಿ

ಎಲಿಮೆಂಟರಿ ಎಜುಕೇಷನ್

ಡಿಜಿಟಲ್ ಮಾರ್ಕೆಟಿಂಗ್

ಇಂಗ್ಲಿಷ್

ಫ್ಯಾಷನ್ ಡಿಸೈನಿಂಗ್

ಗ್ರಾಫಿಕ್ ಡಿಸೈನಿಂಗ್

ಗೇಮ್ ಡಿಸೈನಿಂಗ್

ಇವೆಂಟ್ ಮ್ಯಾನೇಜ್‌ಮೆಂಟ್

ಮರೈನ್ ಎಂಜಿನಿಯರಿಂಗ್

ಆನಿಮೇಷನ್

ಟೆಕ್ಸ್‌ಟೈಲ್ ಡಿಸೈನಿಂಗ್

ಲೆದರ್ ಡಿಸೈನಿಂಗ್

ಟೆಕ್ಸ್‌ಟೈಲ್ ಎಂಜಿನಿಯರಿಂಗ್

ರೈಲ್ವೇ ಎಂಜಿನಿಯರಿಂಗ್

ಮೈನಿಂಗ್ ಎಂಜಿನಿಯರಿಂಗ್

ಪ್ಯಾರಾ ಮೆಡಿಕಲ್ ಕೋರ್ಸ್‌ಗಳು:

ಡಿಪ್ಲೊಮ ಇನ್ ಹಾಸ್ಪೆಟಲ್ ಅಸಿಸ್ಟೆನ್ಸ್

ರುರಲ್ ಹೆಲ್ತ್‌ಕೇರ್

ಪ್ಯಾರಾ ಮೆಡಿಕ್ ನರ್ಸಿಂಗ್

ಪೆತಾಲಜಿ ಲ್ಯಾಬ್ ಟೆಕ್ನಿಷಿಯನ್

ಎಕ್ಸ್-ರೇ ಟೆಕ್ನಾಲಜಿ

ಇಸಿಜಿ ಟೆಕ್ನಾಲಜಿ

ರೇಡಿಯೋಲಜಿ

ಡೆಂಟಲ್ ಮೆಕಾನಿಕ್ಸ್

ಫಾರ್ಮಸಿ

ಐಟಿಐ ಕೋರ್ಸ್‌ಗಳು

ಕೈಗಾರಿಕೋದ್ಯಮ ಸಂಪನ್ಮೂಲಗಳಾದ ಮಾನವ ಸಂಪನ್ಮೂಲ, ಸಾಮಗ್ರಿ ಮತ್ತು ಯಂತ್ರೋಪಕರಣಗಳಲ್ಲಿ ಬಹುಮುಖ್ಯ ಪಾತ್ರ ವಹಿಸುವುದೆಂದರೆ ಮಾನವ ಸಂಪನ್ಮೂಲ. ಈ ಮಾನವ ಸಂಪನ್ಮೂಲವನ್ನು ಅತೀ ಹೆಚ್ಚು ಹೊಂದಿರುವ ದೇಶಗಳೆಂದರೆ ಚೀನಾ ಮತ್ತು ಭಾರತ. ಭಾರತದಲ್ಲಿರುವ ಬಹುತೇಕ ಉದ್ಯೋಗಾಕಾಂಕ್ಷಿಗಳು ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರುವುದರಿಂದ ಉತ್ತಮ ಗುಣಮಟ್ಟದ ಕೈಗಾರಿಕಾ ಕೌಶಲ ಪಡೆದರೆ ಭಾರತ ಭವಿಷ್ಯದ ಕೌಶಲದ ರಾಜಧಾನಿಯಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕೌಶಲ ಆಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ವಿವಿಧ ಯೋಜನೆಗಳಾದ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿ.ಎಂ.ಕೆ.ವಿ.ವೈ), ಸಂಕಲ್ಪ, ಉಡಾನ್, ಪಾಲಿಟೆಕ್ನಿಕ್ ಯೋಜನೆ ಮತ್ತು ಕೌಶಲಯುತ ಶಿಕ್ಷಣದ ಯೋಜನೆಗಳನ್ನು ಕೌಶಲಾಭಿವೃದ್ಧಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸುತ್ತಿದೆ.

ಕೌಶಲ ಆಧಾರಿತ ಶಿಕ್ಷಣವನ್ನು ಯುವಕರಿಗೆ ನೀಡಲು ನವದೆಹಲಿಯ ತರಬೇತಿ ಮಹಾ ನಿರ್ದೇಶನಾಲಯ (ಡಿ.ಜಿ.ಟಿ) ವು ವಿವಿಧ ಕುಶಲಕರ್ಮಿ ತರಬೇತಿ ಯೋಜನೆ (ಸಿ.ಟಿ.ಎಸ್), ಉಭಯ ವ್ಯವಸ್ಥೆ ತರಬೇತಿ (ಡಿ.ಎಸ್.ಟಿ) ಮತ್ತು ಅಪ್ರೆಂಟಿಸ್‌ಶಿಪ್ ತರಬೇತಿ ಯೋಜನೆ (ಎ.ಟಿ.ಎಸ್) ಗಳನ್ನು ಕೈಗಾರಿಕಾ ತರಬೇತಿ ಸಂಸ್ಥೆಗಳು (ಐ.ಟಿ.ಐ) ಹಾಗೂ ಕುಶಲಕರ್ಮಿ ಭೋದಕ ತರಬೇತಿ ಯೋಜನೆಗಳನ್ನು (ಸಿ.ಐ.ಟಿ.ಎಸ್) ಕೇಂದ್ರ ಮತ್ತು ರಾಜ್ಯ ತರಬೇತಿ ಸಂಸ್ಥೆಗಳಲ್ಲಿ ಜಾರಿಗೊಳಿಸುತ್ತಿದೆ. ದೇಶಾದ್ಯಂತ ಕುಶಲಕರ್ಮಿ ತರಬೇತಿ ಯೋಜನೆಯಡಿ 15 ಸಾವಿರಕ್ಕೂ ಅಧಿಕ ಸಂಸ್ಥೆಗಳು ನ್ಯಾಷನಲ್ ಸ್ಕಿಲ್ಸ್ ಕ್ವಾಲಿಫಿಕೇಷನ್ ಫ್ರೇಮ್‌ವರ್ಕ್ ಅಥವಾ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು (ಎನ್.ಎಸ್.ಕ್ಯು.ಎಫ್) ಯೋಜನೆಗೆ ಜೋಡಿಸಿದ 138 ವೃತ್ತಿಗಳಲ್ಲಿ ಒಂದು ಮತ್ತು ಎರಡು ವರ್ಷಗಳ ಕೌಶಲ ತರಬೇತಿಯನ್ನು ನೀಡುತ್ತಿವೆ. ಹಾಗೆಯೇ ಸಿ.ಐ.ಟಿ.ಎಸ್.ಯೋಜನೆಯಡಿ 50ಕ್ಕೂ ಹೆಚ್ಚು ಸಂಸ್ಥೆಗಳು ಎನ್.ಎಸ್.ಕ್ಯು.ಎಫ್ ಆಧಾರಿತ 38 ವೃತ್ತಿಗಳಲ್ಲಿ ಒಂದು ವರ್ಷದ ಕೌಶಲ ತರಬೇತಿಯನ್ನು ನೀಡುತ್ತಿವೆ. ಸಿ.ಟಿ.ಎಸ್ ಮತ್ತು ಸಿ.ಐ.ಟಿ.ಎಸ್ ಯೋಜನೆ ಅಡಿಯಲ್ಲಿ ನೀಡಲಾಗುವ ತರಬೇತಿಯು ಎನ್.ಎಸ್.ಕ್ಯು.ಎಫ್ ಗೆ ಜೋಡಿಸಿದ ತರಬೇತಿಯಾಗಿದ್ದು, ಇದರ ಅನುಸಾರ ಈ ಹಿಂದೆ ಅನುಸರಿಸುತ್ತಿದ್ದ ಪಠ್ಯಕ್ರಮವನ್ನು ರಾಷ್ಟ್ರೀಯ ಮಟ್ಟದಲ್ಲಿ ಒಂದು ಚೌಕಟ್ಟಿನಡಿ ಪರಿಷ್ಕರಿಸಲಾಗಿದೆ.

ಇದರೊಂದಿಗೆ ಭಾರತ ಸರ್ಕಾರದ ಪ್ರಧಾನ ಮಂತ್ರಿ ಶಿಕ್ಷಣ ಯೋಜನೆಯಡಿಯಲ್ಲಿ ಸ್ಕಿಲ್ ಇಂಡಿಯಾ ಕೋರ್ಸ್‌ಗಳು ದೇಶಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಅದರ ತರಬೇತಿಯನ್ನು ನೀಡುತ್ತಿದೆ. ಉದಾ: ಕೃಷಿ ಆಧಾರಿತ ಕೋರ್ಸ್‌ಗಳು, ಕ್ರಿಮಿನಾಶಕ ತಂತ್ರಜ್ಞಾನ, ಯೋಗ, ಸೈಬರ್ ಕ್ರೈಂ ಹೀಗೆ ಹವಾರು ಕೋರ್ಸ್‌ಗಳಿವೆ. ಸೌಲಭ್ಯವನ್ನು ಪ್ರಿಂಟಿಂಗ್ ಟೆಕ್ನೋಲಜಿ (Government institute of Printing Technology, Bangalore) ಇಲ್ಲಿ ಉಚಿತ ಹಾಸ್ಟೆಲ್ ಸೌಲಭ್ಯವಿದೆ. ಮುಂತಾದ ಅಲ್ಪ ಕಾಲಾವಧಿ ಕೋರ್ಸ್‌ಗಳು ಲಭ್ಯವಿದೆ. ಹಾಗಾಗಿ ಈ ಮೇಲಿನ ಯಾವುದಾದರು ಕೋರ್ಸ್‌ನ ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳ ಬಳಿ ಕೋರ್ಸ್ ಮುಕ್ತಾಯದ ಪ್ರಮಾಣ ಪತ್ರವೊಂದಿದ್ದರೆ ಸಾಕು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿದೆ.

ಇಂತಹ ಕಡಿಮೆ ಕಾಲಾವಧಿ ಕೋರ್ಸ್‌ಗಳನ್ನು ಆರ್ಥಿಕವಾಗಿ ಬಹಳ ಹಿಂದುಳಿದ ಅಥವಾ ಕೌಟುಂಬಿಕ ಬಿಕ್ಕಟ್ಟು ಮತ್ತು ಜವಾಬ್ಧಾರಿಯನ್ನು ಹೊಂದಿರುವ, ಇಲ್ಲವೇ ಬೇರೆ ಯಾವುದೇ ಸಮಸ್ಯೆಗೆ ಒಳಗಾಗಿರುವ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ನಂತರ ಖಂಡಿತವಾಗಿಯೂ ಆರಿಸಿಕೊಂಡು ಆರ್ಥಿಕವಾಗಿ ಸಭಲರಾಗಬಹುದು. ಇಂತಹ ಕೋರ್ಸ್ ಗಳ ಜೊತೆಗೆ ರಾಜ್ಯ ಸರ್ಕಾರದಿಂದ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.

ವಿದ್ಯಾರ್ಥಿವೇತನದ ಯೋಜನೆಗಳು

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ-ಆಹಾರ ಮತ್ತು ವಸತಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಹಾಸ್ಟೆಲ್ ಸೌಲಭ್ಯವಿಲ್ಲದ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ತಿಂಗಳಿಗೆ 1500 ರೂ. ವರ್ಗಾಯಿಸಲಾಗುತ್ತದೆ. 8ನೇ ತರಗತಿಯ ನಂತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇನ್ನು ಒಬಿಸಿ ವರ್ಗದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಇದರ ಜತೆ ಉನ್ನತ ಶಿಕ್ಷಣದ ಕೋರ್ಸ್‌ಗಳ ಶುಲ್ಕವನ್ನು ಮರುಪಾವತಿಸಲಾಗುತ್ತದೆ.

ಇಂತಹ ಅನೇಕ ರಾಜ್ಯ ಸರ್ಕಾರ ನೀಡುವ ವಿದ್ಯಾರ್ಥಿವೇತನಗಳ ಯೋಜನೆಗಳಿವೆ.

1. ಕಾರ್ಮಿಕ ಮಂಡಳಿಯಿಂದ ವಿದ್ಯಾರ್ಥಿವೇತನ
2. ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ
3. ಸಾಂದೀಪನಿ ಶಿಷ್ಯವೇತನ ಹೀಗೆ ಹತ್ತು ಹಲವು ಯೋಜನೆಗಳಿವೆ.

ಇವುಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಜೀವದ ಕನಸುಗಳನ್ನು ಛಲಬಿಡದ ಸಾಧಕರಂತೆ ಮುನ್ನಗ್ಗಿ, ಉದ್ಯೋಗಕ್ಕಾಗಿ ಕೈ ಚಾಚುವುದನ್ನು ಬಿಟ್ಟು ಸೃಷ್ಟಿಸುವ ನಿರ್ಮಾತೃಗಳಾಗಿ ಎಂದು ಆಶಿಸುತ್ತೇನೆ.

| ಡಾ.ಪ್ರಿಯಾಂಕಾ ಎಂ.ಜಿ. ಲೇಖಕರು, ಪ್ರಾಧ್ಯಾಪಕರು, ತುಮಕೂರು ವಿಶ್ವವಿದ್ಯಾಲಯ

error: Content is protected !!