ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ‘ನೀಟ್’ ಪರೀಕ್ಷೆಯ ದಿನದಂದೇ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಚುನಾವಣಾ ‍ಪ್ರಚಾರಕ್ಕಾಗಿ ರೋಡ್ ಶೋ ನಡೆಸುತ್ತಿರುವುದು ಖಂಡನೀಯ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪತ್ರಕರ್ತರ ಸಂಘದಿಂದ ಶನಿವಾರ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಧೋರಣೆ ಹಾಗೂ ಈ ವಿಷಯದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇನೆ. ಬೆಂಗಳೂರೊಂದರಲ್ಲೇ 50ಸಾವಿರ ಹಾಗೂ ರಾಜ್ಯದಾದ್ಯಂತ ಒಂದು ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೋಂದಾಯಿಸಿದ್ದಾರೆ. ಬೆಂಗಳೂರಿನಲ್ಲಿ ಮೋದಿ ರೋಡ್ ಶೋಗಾಗಿ ಅನಗತ್ಯವಾಗಿ ಕೆಲವು ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ’ ಎಂದು ದೂರಿದರು.

‘ಮೋದಿ ಪ್ರಚಾರಕ್ಕೆ ನಮ್ಮ ವಿರೋಧವಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ಆಗುವ ತೊಂದರೆಗಳಿಗೆ ಯಾರು ಹೊಣೆ? ಗ್ರಾಮೀಣ ಪ್ರದೇಶದ ಬಹಳಷ್ಟು ಮಂದಿ ಹಾಜರಾಗಲು ಸಾಧ್ಯವಾಗುದಿಲ್ಲ. ಒಂದು ದಿನ ಮುಂಚಿತವಾಗಿ ಬಂದು ಉಳಿದುಕೊಳ್ಳಿ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಸಚಿವೆ ಶೋಭಾ ಕರಂದ್ಲಾಜೆ ನೀಡಿದ್ದಾರೆ. ಇದು ಅತ್ಯಂತ ಖಂಡನೀಯ. ಮುಂಚಿತವಾಗಿ ಹೋಗಿ ಉಳಿದುಕೊಳ್ಳಲಾದೀತೇ? ಇದನ್ನು ಒಪ್ಪಲಾಗುವುದೇ? ಇವರು ಹೇಳಿದಂತೆ ವಿದ್ಯಾರ್ಥಿಗಳು ನಡೆದುಕೊಳ್ಳಬೇಕಾ? ಇದು ಅತಿಯಾಯಿತು’ ಎಂದು ವಾಗ್ದಾಳಿ ನಡೆಸಿದರು. ‘ಸರ್ಕಾರವು ವಿದ್ಯಾರ್ಥಿಗಳಿಗೆ ತೊಂದರೆ ಕೊಡುವ ಯಾವ ಕೆಲಸವನ್ನೂ ಮಾಡಬಾರದು’ ಎಂದು ಹೇಳಿದರು.

‘ರೋಡ್ ಶೋಗೆ ತಡೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ, ಪರೀಕ್ಷೆಯಂದು ರೋಡ್ ಶೋ ನಡೆಸುವುದು ವಿದ್ಯಾರ್ಥಿಗಳಿಗೆ ಕಿರುಕುಳ-ಕಷ್ಟ ನೀಡಿದಂತೆಯೇ’ ಎಂದು ಪ್ರತಿಕ್ರಿಯಿಸಿದರು.

‘ರೋಡ್‌ ಶೋ ಮುಂದೂಡಬಹುದು. ಆದರೆ, ‘ನೀಟ್’ ಪರೀಕ್ಷೆ ಮುಂದೂಡಲಾದೀತೇ? ಪ್ರಧಾನಿಯು ವಿದ್ಯಾರ್ಥಿಗಳ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕಿತ್ತು’ ಎಂದರು.

‘ಇವರು (ಪ್ರಧಾನಿ) ಹೊಸಪೇಟೆಗೆ ಹೋಗುತ್ತಿದ್ದರು. ಅವರಂತೆ ನಾನೂ ಚುನಾವಣಾ ಪ್ರಚಾರಕ್ಕೆಂದು ಗಂಗಾವತಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಲು ಅನುಮತಿಯನ್ನೇ ಕೊಡಲಿಲ್ಲ. ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿದ್ದರೂ, ಪರಿಪರಿಯಾಗಿ ಕೇಳಿಕೊಂಡರೂ ನೀಡಲಿಲ್ಲ. ಹುಬ್ಬಳ್ಳಿಗೆ ಹೋಗಿ ಅಲ್ಲಿಂದ ತೆರಳುತ್ತೇನೆ ಎಂದರೂ ಕೇಳಲಿಲ್ಲ. ನಾನು ಗಂಗಾವತಿಗೆ ಹೋಗಲಾಗಲೇ ಇಲ್ಲ’ ಎಂದರು.

ಮೊಮ್ಮಗ ಉತ್ತರಾಧಿಕಾರಿ ಎಂದಿಲ್ಲ:

‘ನನ್ನ ಮೊಮ್ಮಗ ಧವನ್ ರಾಕೇಶ್ ಇನ್ನೂ 17 ವರ್ಷದವನು. ಅವನು ಒಂದು ವೇಳೆ ರಾಜಕೀಯಕ್ಕೆ ಬಂದರೆ ಇನ್ನೂ 8ರಿಂದ 10 ವರ್ಷ ಆಗಬಹುದು. ಆತ ನನ್ನ ಉತ್ತರಾಧಿಕಾರಿ ಎಂದು ನಾನು ಹೇಳಿಯೇ ಇಲ್ಲ. ನನ್ನ ಮಗನ ನಂತರ ನನ್ನ ಮೊಮ್ಮಗ ಬರಬಹುದು ಎಂದಷ್ಟೇ ಹೇಳಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

‘ಬಿಜೆಪಿಯ ರಾಜ್ಯ ನಾಯಕರು ಮತ ಕೇಳುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ಮುಖವಿಲ್ಲ. ಆದ್ದರಿಂದ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪದೇ ಪದೇ ಕರೆಸುತ್ತಿದ್ದಾರೆ. ಇದರಿಂದ ಅನುಕೂಲ ಆಗಬಹುದು ‌ಎಂಬ ಭ್ರಮೆಯಲ್ಲಿ ಆ ಪಕ್ಷದವರಿದ್ದಾರೆ. ಅವರು ಎಷ್ಟು ಬಾರಿ ಬಂದರೂ ಮತದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಹೇಳಿದರು.

ಜಾತಿ-ಜಾತಿ ನಡುವೆ ವಿಷ ಬೀಜ:

‘ಹೈಕಮಾಂಡ್ ಸೂಚನೆಯಂತೆ ಹಾಗೂ ಹುಟ್ಟೂರಲ್ಲೇ ಚುನಾವಣಾ ರಾಜಕಾರಣ ಅಂತ್ಯಗೊಳಿಸಲೆಂದು ವರುಣದಲ್ಲಿ ಸ್ಪರ್ಧಿಸಿದ್ದೇನೆ. ಈ ಕ್ಷೇತ್ರದವರು ಯಾವತ್ತೂ ಜಾತಿವಾದಿಗಳಲ್ಲ. ಹಾಗಿದ್ದರೆ ನಾನು 2 ಬಾರಿ ಹಾಗೂ ಮಗ ಡಾ.ಯತೀಂದ್ರ ಒಮ್ಮೆ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಬಿಜೆಪಿಯವರು ಜಾತಿ-ಜಾತಿ ನಡುವೆ ವಿಷ ಬಿತ್ತುತ್ತಿದ್ದಾರೆ. ಅಪಪ್ರಚಾರವನ್ನೂ ಶುರು ಮಾಡಿದ್ದಾರೆ. ಬಿಜೆಪಿಯ ಷಡ್ಯಂತ್ರವನ್ನು ಮೆಟ್ಟಿ ಜನರು ನನಗೆ ಆಶೀರ್ವಾದ ಮಾಡುತ್ತಾರೆ; ಬಹಳ ದೊಡ್ಡ ಅಂತರದಿಂದ ಗೆಲ್ಲುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

error: Content is protected !!