ಹುಣಸಗಿ: ವಿಧಾನಸಭಾ ಚುನಾವಣೆಗೆ ಸುರಪುರ ಮತಕ್ಷೇತ್ರದಿಂದ ಮತ್ತೊಮ್ಮೆ ಆಯ್ಕೆ ಬಯಸಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಚುನಾವಣೆಗೆ ಕೇವಲ ಆರು ದಿನ ಮಾತ್ರ ಬಾಕಿ ಉಳಿದಿದ್ದು, ಕಣ ರಂಗೇರುತ್ತಿದ್ದು, ಪ್ರಚಾರದ ಭರಾಟೆ ಹೆಚ್ಚಾಗುತ್ತಿದೆ.

ಆದರೆ, ಯಾದಗಿರಿ ಜಿಲ್ಲೆ ಹಾಗೂ ತಾಲ್ಲೂಕಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಎಂಬಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳ ಪ್ರಚಾರ ಸಂದರ್ಭದಲ್ಲಿ ಅರೆ ಸೇನಾ ಪಡೆಯ ತಂಡ ಅಭ್ಯರ್ಥಿಗಳ ಜೊತೆಗೆ ತೆರಳುತ್ತಾ ಸೂಕ್ತ ಬಂದೋಬಸ್ತ್ ಒದಗಿಸುತ್ತಿದ್ದಾರೆ.

ಏ.6ರಂದು ಸುರಪುರ ಮತಕ್ಷೇತ್ರದ ಕೊಡೇಕಲ್ಲ ಗ್ರಾಮದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದ ಬಳಿಕ ಪೊಲೀಸ್ ಇಲಾಖೆ ಸೂಕ್ತ ಎಚ್ಚರಿಕೆ ಹೆಜ್ಜೆಗಳನ್ನು ಇಡುತ್ತಿದೆ. ಇಲ್ಲಿಯವರೆಗೂ ಮತಕ್ಷೇತ್ರದಲ್ಲಿ ಪ್ರಚಾರ ಸಂದರ್ಭದಲ್ಲಿ ಸೇನಾ ಪಡೆಯ ತಂಡ ಬರುತ್ತಿರಲಿಲ್ಲ. ಚುನಾವಣೆ ಒಂದೆರಡು ದಿನ ಇದ್ದಾಗ ಮಾತ್ರ ಬರುತ್ತಿತ್ತು. ಆದರೆ, ಈ ಬಾರಿ ಪ್ರತಿ ಗ್ರಾಮಕ್ಕೂ ತೆರಳಿದಾಗಲೂ ಅವರ ಪ್ರಚಾರ ಸಭೆಯ ಸಂದರ್ಭದಲ್ಲಿ ಸುತ್ತುವರೆದು ನಿಂತು ಸೂಕ್ತ ರಕ್ಷಣೆ ಕೊಡಲಾಗುತ್ತಿದೆ. ಎರಡೂ ತಂಡಗಳಲ್ಲಿ ಸುಮಾರು 10 ಜನ ಅರೆ ಸೇನಾ ಪಡೆಯವರು ಕೆಲಸ ನಿರ್ವಹಿಸುತ್ತಿದ್ದಾರೆ.

ಅಭ್ಯರ್ಥಿಗಳ ನಿಗದಿಯಾದ ಸ್ಥಳಕ್ಕೆ ಕ್ರೂಜರ್‌ ವಾಹನದ ಮೂಲಕ ಮಿಲಿಟರಿ ಪಡೆಯ ಸಿಬ್ಬಂದಿ ತೆರಳಿ ದೂರದಲ್ಲಿ ನಿಂತು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಂದೂಕುಧಾರಿಗಳಾಗಿ ಪ್ರಚಾರ ನಡೆಯುವ ಸ್ಥಳದಲ್ಲಿ ಬೀಡು ಬಿಟ್ಟಿರುವ ಅರೆ ಸೇನಾ ಪಡೆಯವರು ಕಾನೂನುನಿಗೆ ಭಂಗ ಬರದಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

‘ಗ್ರಾಮೀಣ ಭಾಗದಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಯಾವುದೇ ಅಹಿತರಕ ಘಟನೆ ನಡೆಯದಂತೆ ಪೊಲೀಸರ ಜೊತೆಯಲ್ಲಿ ಅರೆ ಸೇನಾ ಪಡೆ ಕಾರ್ಯನಿರ್ವಹಿಸುತ್ತಿರುವುದು ಉತ್ತಮ’ ಎಂದು ಬಿಜೆಪಿ ಅಭ್ಯರ್ಥಿ ನರಸಿಂಹನಾಯಕ (ರಾಜೂಗೌಡ) ಹೇಳುತ್ತಾರೆ.

‘ಇನ್ನೂ ಕೆಲ ಭಾಗಗಳಲ್ಲಿ ಇಂದಿಗೂ ಭಯದ ವಾತಾವರಣವಿದೆ. ಆದ್ದರಿಂದ ಸೂಕ್ತ ಬಂದೋಬಸ್ತ್ ಇರುವುದು ನ್ಯಾಯ ಸಮ್ಮತ ಚುನಾವಣೆ ಸಹಕಾರಿಯಾಗಲಿದೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ ಹೇಳಿದರು.

‘ಸುರಪುರ ಸೂಕ್ಷ್ಮ ಮತಕ್ಷೇತ್ರದಲ್ಲಿ ಒಂದಾಗಿದ್ದು, ಕಳೆದ ತಿಂಗಳು ನಡೆದ ಕೊಡೇಕಲ್ಲ ಘಟನೆಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಧಕ್ಕೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.


ಹುಣಸಗಿ ತಾಲ್ಲೂಕಿನ ದೇವಪುರ (ಜೆ) ಗ್ರಾಮದಲ್ಲಿ ನಡೆದ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ ಅವರ ವಾಹನದ ಬಳಿ ಬಂದೋಬಸ್ತ್‌ಗೆ ನಿಂತಿರುವ ಮಿಲಿಟರಿ ಸಿಬ್ಬಂದಿ

error: Content is protected !!