
ಬೆಂಗಳೂರು : ಕಾಂಗ್ರೆಸ್ ಪಕ್ಷದಿಂದ ಬಜರಂಗದಳ ನಿಷೇಧ ಪ್ರಣಾಳಿಕೆಯ ಘೋಷಣೆಯನ್ನು ವಾಪಾಸ್ಸು ಪಡೆಯುವುದಿಲ್ಲ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಕಾಂಗ್ರೆಸ್ ನಿಂದ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ರಾಜ್ಯದಲ್ಲಿ ನಿಷೇಧಿಸುವುದಾಗಿ ಘೋಷಿಸಿರುವಂತ ವಿಚಾರವಾಗಿ ವಿವಾದ ಉಂಟಾಗಿದೆ.
ಬಿಜೆಪಿಯಿಂದ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು.
ಈ ವಿಷಯವಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ನಾಯಕರು ಮಹತ್ವದ ಸಭೆಯನ್ನು ನಡೆಸಿ, ಬಜರಂಗದಳ ನಿಷೇಧದ ವಿವಾದದ ಬಗ್ಗೆ ಚರ್ಚಿಸಿದರು. ಈ ಬಳಿಕ ಮಾತನಾಡಿದಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಬಜರಂಗದಳಕ್ಕೂ, ಆಂಜನೇಯನಿಗೂ ಏನು ಸಂಬಂಧವಿದೆ. ನಾನು ಕೂಡ ರಾಮ, ಆಂಜನೇಯ ಹಾಗೂ ಶಿವ ಭಕ್ತ ಎಂಬುದಾಗಿ ಹೇಳಿದರು.
ನಾನು ಕೂಡ ದಿನವೂ ಹನುಮಾನ್ ಚಾಲೀಸ್ ಪಠಣ ಮಾಡುತ್ತೇವೆ. ಕುಂಬಳಕಾಯಿ ಕಳ್ಳ ಅಂದ್ರೆ ಇವರು ಯಾಕೆ ಹೆಗಲುಮುಟ್ಟಿಕೊಂಡು ನೋಡಿಕೊಳ್ಳುತ್ತಾರೆ ಎಂಬುದಾಗಿ ಟಾಂಗ್ ನೀಡಿದರು.
ಆಂಜನೇಯನಿಗೂ, ಬಜರಂಗದಳಕ್ಕೂ ಸಂಬಂಧವಿಲ್ಲ. ಬಿಜೆಪಿಯವರಿಗೆ ಯಾಕೆ ಬಜರಂಗದಳವನ್ನು ಬ್ಯಾನ್ ಮಾಡುತ್ತೇವೆ ಅಂದರೆ ಗಾಬರಿ ಬೀಳುತ್ತಾರೋ ಗೊತ್ತಿಲ್ಲ. ನಮ್ಮ ಗ್ಯಾರಂಟಿ ಐತಿಹಾಸಿಕ ಕಾರ್ಡ್ ಆಗಿದೆ. ನಾವು ಕೊಟ್ಟಿರೋ ಗ್ಯಾರಂಟಿ ಭರವಸೆಯನ್ನು ಈಡೇರಿಸುತ್ತೇವೆ. ಬಜರಂಗದಳ ನಿಷೇಧ ಘೋಷಣೆ ವಾಪಾಸ್ ಪಡೆಯೋ ಮಾತೇ ಇಲ್ಲ ಎಂದರು.