ಕನಕಗಿರಿ, ಗಂಗಾವತಿ ಕ್ಷೇತ್ರಗಳಿಗೆ ಜಿಲ್ಲಾಧಿಕಾರಿಗಳ ಭೇಟಿ; ಪರಿಶೀಲನೆ

ಕೊಪ್ಪಳ ಮೇ 01 : ಕರ್ನಾಟಕ ವಿಧಾನಸಭಾ ಚುನಾವಣೆ-2023 ಹಿನ್ನೆಲೆಯಲ್ಲಿ, ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಮೇ 1 ರಂದು ಗಂಗಾವತಿ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದರು.

ಮೊದಲಿಗೆ ಗಂಗಾವತಿ ಕ್ಷೇತ್ರಕ್ಕೆ ಭೇಟಿ ನೀಡಿದರು. ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, ಮತಗಟ್ಟೆ ಅಧಿಕಾರಿ-2 ಮತ್ತು ಮತಗಟ್ಟೆ ಅಧಿಕಾರಿ-3 ಇವರಿಗೆ ಗಂಗಾವತಿ ನಗರದ ತಾಲೂಕು ಪಂಚಾಯತ್ ಕಚೇರಿ ಹತ್ತಿರದ ಲಯನ್ಸ್ ಶಾಲೆಯಲ್ಲಿ ನಡೆದ ತರಬೇತಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.

ಗಂಗಾವತಿಯಲ್ಲಿ ಈಗಾಗಲೇ ಮೊದಲನೇ ತರಬೇತಿ ಯಶಸ್ವಿಯಾಗಿ ನಡೆದಿದೆ. ಮೇ 1ರಂದು ನಡೆದ ಎರಡನೇ ತರಬೇತಿಯಲ್ಲಿ ಪಿಆರ್‌ಓ, ಎಪಿಆರ್‌ಓ, ಪಿಓ-2 ಮತ್ತು ಪಿಓ-3 ಸೇರಿ ಒಟ್ಟು 1126 ಜನರು ಭಾಗಿಯಾಗಿದ್ದಾರೆ ಎಂದು ಗಂಗಾವತಿ ಕ್ಷೇತ್ರದ ಚುನಾವಣಾಧಿಕಾರಿಗಳಾದ ಬಸವಣ್ಣೆಪ್ಪ ಕಲಶೆಟ್ಟಿ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಬಳಿಕ ಜಿಲ್ಲಾಧಿಕಾರಿಗಳು ಕನಕಗಿರಿ ಕ್ಷೇತ್ರಕ್ಕೆ ತೆರಳಿದರು. ಕನಕಗಿರಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ತರಬೇತಿ ಸ್ಥಳಕ್ಕೆ ಭೇಟಿ ನೀಡಿ ತರಬೇತಿ ಸ್ಥಳ, ಊಟದ ವ್ಯವಸ್ಥೆಯನ್ನು ಪರಿಶೀಲಿಸಿದರು. ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ಮೊದಲು ಏಪ್ರೀಲ್ 16ರಂದು ಮೊದಲನೇ ತರಬೇತಿ ನಡೆದಿತ್ತು. ಮೇ 1ರಂದು ನಡೆದ ಎರಡನೇ ತರಬೇತಿಯಲ್ಲಿ 1200ಕ್ಕೂ ಹೆಚ್ಚು ಜನರು ತರಬೇತಿಯಲ್ಲಿ ಭಾಗಿಯಾಗಿದ್ದಾರೆ ಎಂದು ಕನಕಗಿರಿ ಕ್ಷೇತ್ರದ ಚುನಾವಣಾಧಿಕಾರಿ ಸಮೀರ್ ಮುಲ್ಲಾ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ ಸಂಜಯ ಕಾಂಬಳೆ ಅವರು ಮಾಹಿತಿ ನೀಡಿದರು.

ಚುನಾವಣಾ ತರಬೇತಿ ಪಡೆಯುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನುದ್ದೇಶಿಸಿ ಇದೆ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಹಿನ್ನೆಲೆಯಲ್ಲಿ ಮೇ 1ರಂದು ಗಂಗಾವತಿ ಮತ್ತು ಕನಕಗಿರಿ ಸೇರಿದಂತೆ ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಟ್ಟೆಗಳಿಗೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎರಡನೇ ತರಬೇತಿ ನಡೆಯುತ್ತಿದೆ. ತರಬೇತಿ ಪಡೆದಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯು ಗೊಂದಲಕ್ಕೆ ಅವಕಾಶವಿಲ್ಲದ ಹಾಗೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.

ದೇಶದ ಪ್ರಜಾಪ್ರಭುತ್ವದ ಭದ್ರಬುನಾದಿಯಾಗಿರುವ ಮತದಾನ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವಲ್ಲಿ ಮತಗಟ್ಟೆಗೆ ನೇಮಕಗೊಂಡ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಾತ್ರ ಮಹತ್ವದಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಅತ್ಯಂತ ಪ್ರಾಮಾಣಿಕವಾಗಿ ಚುನಾವಣಾ ಕಾರ್ಯದಲ್ಲಿ ತೊಡಗಬೇಕು ಎಂದು ಸೂಚಿಸಿದರು.

ತರಬೇತಿಯಲ್ಲಿ ಒದಗಿಸುವ ಮಾಹಿತಿಯನ್ನು ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಂಡು ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ನ್ನು ಯಶಸ್ವಿಗೊಳಿಸಬೇಕೆಂದು ಸಲಹೆ ಮಾಡಿದರು.
ತರಬೇತಿ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿಗಳ ಭೇಟಿ: ಅಪರ ಜಿಲ್ಲಾ ಚುಣಾವಣಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಮೇ 1ರಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ಚರ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮೇ 1ರಂದು ನಡೆದ ತರಬೇತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಇನ್ನೀತರ ತಂಡಗಳಿಗೆ ನಡೆದ ಎರಡನೇ ತರಬೇತಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ 1328 ಜನರು ಭಾಗಿಯಾಗಿದ್ದಾರೆ. ಮಾಸ್ಟರ್ ಟ್ರೇನರ್ ಮತ್ತು ಸೆಕ್ಟರ್ ಆಫಿರ‍್ಸ್ ಕಡೆಯಿಂದ ತರಬೇತಿ ಕೊಡಿಸಲಾಗಿದೆ ಎಂದು ಇದೆ ವೇಳೆ ಕೊಪ್ಪಳ ಕ್ಷೇತ್ರದ ಚುನಾವಣಾಧಿಕಾರಿಗಳಾದ ಮಲ್ಲಿಕಾರ್ಜುನ ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಆಗಿರುವ ತಹಸೀಲ್ದಾರ ಅಮರೇಶ ಬಿರಾದಾರ, ಡಯಟ್ ಪ್ರಾಂಶುಪಾಲರಾದ ಕೃಷ್ಣಮೂರ್ತಿ ದೇಸಾಯಿ ಮತ್ತು ತಹಸೀಲ್ ಕಚೇರಿಯ ಚುನಾವಣಾ ಶಾಖೆಯ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

error: Content is protected !!