ಗಂಗಾವತಿ : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣದ್ದು ಒಂದು ಆಟ ಆದರೆ, ಕೊಪ್ಪಳಲ್ಲಿ ಬೇರೆಯದ್ದೇ ಆಟ ಇದೆ. ಇದಕ್ಕೆ ಕಾರಣ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ, ಗಣಿ ದಣಿ ಜನಾರ್ಧನ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ಅವರು ಈಗ ತಮ್ಮದೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿಕೊಂಡು ಕಣಕ್ಕೆ ಇಳಿದಿದ್ದಾರೆ.

ಬಿಜೆಪಿಯಲ್ಲಿದ್ದಾಗ ಸಚಿವರಾಗಿದ್ದ ಜನಾರ್ಧನ ರೆಡ್ಡಿ ಈಗ ಅದರಿಂದ ಬೇರ್ಪಟ್ಟು ಸ್ವತಃ ಪಕ್ಷ ಸ್ಫಾಪನೆ ಮಾಡಿಕೊಂಡಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರಕ್ಕೆ ಬಿಜೆಪಿ ಹಾಲಿ ಶಾಸಕ ಪರಣ್ಣ ಮುನವಳ್ಳಿ, ಕಾಂಗ್ರೆಸ್ ಪಕ್ಷ ಇಕ್ಬಾಲ್ ಅನ್ಸಾರಿ, ಜೆಡಿಎಸ್ ಪಕ್ಷ ಎಚ್. ಆರ್. ಚನ್ನಕೇಶವ ಅಭ್ಯರ್ಥಿಗಳು ಎಂದು ಘೋಷಣೆ ಮಾಡಿದೆ. ಇವೆರೆಲ್ಲರಿಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪಗ್ರತಿ ಪಕ್ಷದಿಂದ ಎದುರಾಳಿ. ಆದ್ದರಿಂದ ಈ ಚುನಾವಣೆ ಬಹುಕೋನದ ಸ್ಪರ್ಧೆ ಕುತೂಹಲಕ್ಕೆ ಕಾರಣವಾಗಿದೆ.

ಕ್ಷೇತ್ರದಲ್ಲಿ ಹೊಸ ಸಂಚಲನ:

ಜನಾರ್ದನ ರೆಡ್ಡಿಯವರು ಈ ಬಾರಿ ಗಂಗಾವತಿಯಿಂದ ಸ್ಪರ್ಧೆಗಿಳಿಯುವುದರಿಂದ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದಂತಾಗಿದೆ. ರೆಡ್ಡಿ ಆಗಮಿಸುತ್ತಿದ್ದಂತೆ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿಗಳು ಚುನಾವಣೆ ಪ್ರಚಾರವನ್ನು ಮತ್ತಷ್ಟು ಚುರುಕುಗೊಳಿದ್ದಾರೆ. ಬಿಜೆಪಿಯಲ್ಲಿ ಹಾಲಿ ಶಾಸಕ ಪರಣ್ಣ ಮುನವಳ್ಳಿ ನನಗೆ ಟಿಕೆಟ್ ಎಂದು ತಾವೇ ಘೋಷಿಸಿಕೊಂಡಿದ್ದು, ಕಾಂಗ್ರೆಸ್‌ ಟಿಕೆಟ್​ಗಾಗಿ ಮೂವರು ಸಮರ ಮುಂದುವರೆಸಿದ್ದಾರೆ.

ರೆಡ್ಡಿ ಪಕ್ಷಕ್ಕೆ ಹಲವರು:

ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿರುವ ರೆಡ್ಡಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮತಗಳ ಲಾಭವನ್ನು ಪಡೆಯಲು ಪ್ಲಾನ್‌ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಇತ್ತೀಚೆಗಷ್ಟೇ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗಂಗಾವತಿಗೆ ಬಂದಿದ್ದ ನಳಿನ್‌ ಕುಮಾರ್‌ ಕಟಿಲ್‌ ಕೂಡ ಹನುಮ ಉದಯಿಸಿದ ನಾಡು ಅಂಜನಾದ್ರಿ ಕ್ಷೇತ್ರದಲ್ಲಿ ಹಿಂದೂ ಶಾಸಕರೇ ಅಧಿಕಾರಲ್ಲಿ ಇರಬೇಕು ಎಂದು ಹೇಳಿದ್ದರು. ಈ ಮೂಲಕ ಆಂಜನೇಯನ ಜಪ ಮಾಡಿ ಬಿಜೆಪಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಆದರೆ ಮುಂದುವರೆದ ಬೆಳವಣಿಗೆಯಂತೆ ಹಲವಾರು ಬಿಜೆಪಿ ಹಾಗೂ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ರೆಡ್ಡಿ ಪಕ್ಷ ಸೇರಿದ್ದಾರೆ.

ಲಿಂಗಾಯತ ಮತಗಳು ಅಧಿಕ:

ಇನ್ನು ಕ್ಷೇತ್ರದಲ್ಲಿ ಲಿಂಗಾಯತ, ಮುಸ್ಲಿಂ ಹಾಗೂ ಕುರುಬ ಜನಾಂಗದ ಮತಗಳು ಅಧಿಕ ಸಂಖ್ಯೆಯಲ್ಲಿವೆ. ಮುಸ್ಲಿಂ ಮತಗಳು ನಗರ ಪ್ರದೇಶದಲ್ಲಿ ಇದ್ದರೆ, ಗ್ರಾಮೀಣ ಭಾಗದಲ್ಲಿ ಲಿಂಗಾಯತ ಹಾಗೂ ಕುರುಬ ಮತಗಳು ಅಧಿಕವಾಗಿವೆ. ಗಂಗಾವತಿಯಲ್ಲಿ ದೇವಸ್ಥಾನ ಹಾಗೂ ಮಸೀದಿಗಳಿಗೆ ಭೇಟಿ ನೀಡುತ್ತಿರುವ ಜನಾರ್ದನ ರೆಡ್ಡಿ, ಬಿಜೆಪಿ ಪಕ್ಷದಲ್ಲಿ ಅಸಮಾಧಾನಗೊಂಡಿರುವ ಕಾರ್ಯಕರ್ತರು ಹಾಗೂ ಇಕ್ಬಾಲ್ ಅನ್ಸಾರಿಯವರ ಬೆಂಬಲಿಗರನ್ನು ಸಂಪರ್ಕ ಮಾಡಿದ್ದಾರೆ.

ಈ ಮೂಲಕ ಗಂಗಾವತಿಯಲ್ಲಿ ಪರಣ್ಣ ಹಾಗೂ ಇಕ್ಬಾಲ್ ಅನ್ಸಾರಿ ಅವರಿಗೆ ಬಿಸಿಮುಟ್ಟಿಸಲು ರೆಡ್ಡಿ ನಿರ್ಧಾರ ಮಾಡಿದ್ದಾರೆ. ಈ ನಡುವೆಯೇ ಬಳ್ಳಾರಿಯ ರೀತಿಯಲ್ಲಿ ಗಂಗಾವತಿಯನ್ನು ಸಹ ಐದು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂಬ ಆಶ್ವಾಸನೆಯನ್ನೂ ನೀಡಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಗಂಗಾವತಿಗೆ ರೆಡ್ಡಿ ಎಂಟ್ರಿ ಆದಾಗಿನಿಂದ ಕಾಂಗ್ರೆಸ್‌, ಬಿಜೆಪಿ ನಾಯಕರಿಗೆ ತಳಮಳ ಉಂಟಾಗಿದೆ.

ಪರಣ್ಣ ಮುನವಳ್ಳಿ ವಿರುದ್ಧ ಸೋಲು:

2004 ರಿಂದ 2013ರ ತನಕ ಮೂರು ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಇಕ್ಬಾಲ್ ಅನ್ಸಾರಿ ಎರಡು ಬಾರಿ ಗೆದ್ದಿದ್ದಾರೆ. 2018ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಬಿಜೆಪಿಯ ಪರಣ್ಣ ಮುನವಳ್ಳಿ ವಿರುದ್ಧ ಅವರು ಸೋಲು ಕಂಡಿದ್ದರು. ಈ ಬಾರಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಎಚ್. ಆರ್. ಶ್ರೀನಾಥ್ ಪೈಪೋಟಿಯ ನಡುವೆಯೂ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಸ್ಲಿಂ ಸಮುದಾಯ ಅವರ ಬೆನ್ನಿಗೆ ನಿಂತರೆ ಕಾಂಗ್ರೆಸ್‌ಗೆ ಗೆಲುವು ಸುಲಭ. ಇಲ್ಲದಿದ್ದರೆ ಲೆಕ್ಕಚಾರ ಉಲ್ಟಾ ಆಗಲಿದೆ.

ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದ ಟಿಕೆಟ್ ಕೈತಪ್ಪಿದ ಎಚ್. ಆರ್. ಶ್ರೀನಾಥ್‌ರನ್ನು ಜನಾರ್ದನ ರೆಡ್ಡಿ ಭೇಟಿ ಮಾಡಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಹಂಚಿ ಹೋಗುವ ಮತಗಳ ಮೇಲೆ ಅವರು ಕಣ್ಣಿಟ್ಟಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಪರಣ್ಣ ಮುನವಳ್ಳಿ 67,617 ಮತಗಳನ್ನು ಪಡೆದು ಜಯಗಳಿಸಿದ್ದರು.

ಕೊಪ್ಪಳ, ಗದಗ ಮೇಲೆ ಅಪಾರ ಪ್ರೀತಿ:

ಕಾಂಗ್ರೆಸ್‌ನ ಇಕ್ಬಾಲ್ ಅನ್ಸಾರಿ 59,644 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಕರಿಯಣ್ಣ ಸಂಘಟಗಿ 14,161 ಮತಗಳನ್ನು ಪಡೆದಿದ್ದರು. ಜನಾರ್ದನ ರೆಡ್ಡಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕಾಲದಿಂದಲೂ ಕೊಪ್ಪಳ, ಗದಗ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಅಲ್ಲಿ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಸುಪ್ರೀಂಕೋರ್ಟ್‌ ಆದೇಶದಂತೆ ಬಳ್ಳಾರಿಗೆ ಭೇಟಿ ನೀಡಲು ಸಾಧ್ಯವಿಲ್ಲದೆ ಅವರು ಕೊಪ್ಪಳದ ಗಂಗಾವತಿ ಆಯ್ಕೆಮಾಡಿಕೊಂಡು ಅಲ್ಲಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಎಲ್ಲ ಪಕ್ಷದವರಿಗೂ ಈಗ ರೆಡ್ಡಿಯೇ ಟಾರ್ಗೆಟ್‌ ಆಗಿದ್ದಾರೆ.

error: Content is protected !!