
ಗಂಗಾವತಿ : ಉತ್ತರ ಭಾರತದ ಆಯೋಧ್ಯೆಯ ರಾಮಮಂದಿರ ಮತ್ತು ದಕ್ಷಿಣ ಭಾರತದ ಗಂಗಾವತಿಯ ಅಂಜನಾದ್ರಿಯ ಆಂಜನೇಯ ಈ ಎರಡೂ ಪವಿತ್ರ ಸ್ಥಳಗಳು ದೇಶವನ್ನು ಒಂದು ಮಾಡುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರ ಎಕ್ ಭಾರತ್ ಶ್ರೇಷ್ಠ ಭಾರತ್ ಎನ್ನುವ ಪರಿಕಲ್ಪನೆ ಸಾಕಾರಗೊಳಿಸಲು ಇವು ನೆರವಾಗಲಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.
ಇಲ್ಲಿ ಭಾನುವಾರ ಗಂಗಾವತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಮತಯಾಚನೆ ಮಾಡಿದ ಅವರು ಅಯೋಧ್ಯೆದಲ್ಲಿ ಶ್ರೀರಾಮಮಂದಿರ ಅಭಿವೃದ್ಧಿಯಾಗುತ್ತಿದೆ. ಕಿಷ್ಕೆಂಧ ಕ್ಷೇತ್ರವಾದ ಅಂಜನಾದ್ರಿ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಈಗಾಗಲೇ ₹120 ಕೋಟಿ ಅನುದಾನ ನೀಡಿದೆ. ಆಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನ ನಿರ್ಮಾಣವಾಗಲಿದೆ. ಅದರ ಉದ್ಘಾಟನೆಗೆ ನೀವೆಲ್ಲರೂ ಬರಬೇಕು. ನಿಮ್ಮ ಸ್ವಾಗತಕ್ಕಾಗಿ ಉತ್ಸಾಹದಿಂದ ಕಾಯುತ್ತೇನೆ. ಅಂಜನಾದ್ರಿ ಹಾಗೂ ರಾಮನ ದರ್ಶನ ಸುಲಭವಾಗಿಸಲು ಗಂಗಾವತಿಯಿಂದ ಆಯೋಧ್ಯಕ್ಕೆ ಕೇಂದ್ರ ಸರ್ಕಾರ ರೈಲು ಸೌಲಭ್ಯ ಕಲ್ಪಿಸಲಿದೆ’ ಎಂದರು.

ಶ್ರೀರಾಮನ ಭಕ್ತ ಹುಟ್ಟಿದ ನಾಡು, ಆಂಜನೇಯನ ಭಕ್ತರ ನೆಲೆವೀಡು ಗಂಗಾವತಿ ಜನರಿಗೆ ಕೋಟಿ ಕೋಟಿ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳಿ ಆದಿತ್ಯನಾಥ ಮಾತು ಆರಂಭಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆಗಳನ್ನು ಮೊಳಗಿಸಿದರು.
ಶಬರಿಯ ಹಣ್ಣು ತಿಂದ ರಾಮನ ಪುಣ್ಯ ಭೂಮಿ ಇದು. ಇಂಥ ಪುಣ್ಯಭೂಮಿಯಿಂದ ನೀವು ಆಯೋಧ್ಯೆಗೆ ಬಂದು ರಾಮನ ದರ್ಶನ ಮಾಡಬೇಕು. ಆಯೋಧ್ಯೆದಲ್ಲೂ ಬೃಹತ್ ಹನುಮನ ಮಂದಿರ ಇದೆ ಎಂದರು.

ಸುಮಾರು 25 ನಿಮಿಷಗಳ ತಮ್ಮ ಭಾಷಣದಲ್ಲಿ ಹಿಂದೂತ್ವದ ಮಂತ್ರ ಜಪಿಸಿದ ಅವರು ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿದರು. ಡಬಲ್ ಎಂಜಿನ್ ಸರ್ಕಾರದಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತದ ಸರ್ಕಾರಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿಗೆ ಮತ ನೀಡಿದರೆ ರಾಮನ ಭಕ್ತನ ಕ್ಷೇತ್ರ ವೇಗವಾಗಿ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದರು.
ಪರಣ್ಣ ಮುನವಳ್ಳಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ತುಷ್ಠೀಕರಣದ ರಾಜಕಾರಣ ಮಾಡುತ್ತಿದೆ. ಬಿಜೆಪಿ ಸಶಕ್ತೀಕರಣ ಹಾಗೂ ಅಭಿವೃದ್ಧಿಗೆ ಒತ್ತು ಕೊಟ್ಟು ಆಡಳಿತ ನಡೆಸುತ್ತಿದೆ ಎಂದರು.
ಉಡುಗೊರೆ: ಯೋಗಿ ಆದಿತ್ಯನಾಥ ಅವರಿಗೆ ಪಕ್ಷದ ವತಿಯಿಂದ ಆಂಜನೇಯನ ಭಾವಚಿತ್ರ ಮತ್ತು ಬೆಳ್ಳಿ ಗಧೆ ಉಡುಗೊರೆ ನೀಡಲಾಯಿತು.