ಕೊಪ್ಪಳ: ಒಂದು ಸಮಾಜ ಮುಂದಾಗಬೇಕಾದರೆ ಮತ್ತು ಸರಕಾರಿ ಸೌಲಭ್ಯಗಳನ್ನು ಪಡೆದು ರಾಜಕೀಯವಾಗಿ ಗುರುತಿಸಿಕೊಳ್ಳಬೇಕಾದರೆ ಒಗ್ಗಟ್ಟಿನ ಮಂತ್ರ ಬಹು ಮುಖ್ಯವಾಗಿದ್ದು ವಿಶ್ವಕರ್ಮ ಸಮಾಜ ರಾಜಕೀಯ ಸೌಲಭ್ಯ ಪಡೆಯಲು ಒಗ್ಗಟ್ಟಿನ ಹೋರಾಟದಿಂದ ಮಾತ್ರ ಸಾಧ್ಯ ಎಂದು ಶಿರಸಂಗಿಯ ವಿಶ್ವಕರ್ಮ ಸಮಾಜದ ವಿಕಾಸ ಸಂಸ್ಥೆಯ ಅಧ್ಯಕ್ಷ ಹಾಗೂ ನಿವೃತ್ತ ಪ್ರೊಫೆಸರ್ ಪಿ.ಬಿ ಬಡಿಗೇರ ಅಭಿಪ್ರಾಯ ಪಟ್ಟರು.

ನಗರದ ಶ್ರೀ ಸಿರಸಪ್ಪಯ್ಯನಮಠದಲ್ಲಿ ವಿಶ್ವಕರ್ಮ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಮೌನೇಶ್ವರ ಹಾಗೂ ಸಿರಸಪ್ಪಯ್ಯನವರ ಜಯಂತಿ ಅಂಗವಾಗಿ ಉಪನಯನ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.

ಎಲ್ಲ ಕಡೆ ನಮ್ಮನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಾರೆ. ನಮ್ಮ ಸಮಾಜದವರು ಹಾಗೆ ಹೀಗೆ ಎಂದು ಹೊಗಳಿಬಿಟ್ಟರೆ ನಮ್ಮನ್ನು ನಾವು ಮರೆತುಬಿಡುತ್ತೇವೆ. ಇದರಿಂದ ನಾವು ಮೂಲೆಗುಂಪಾಗುತ್ತಿರುವುದು ವಾಸ್ತವ ಸ್ಥಿತಿಯಾಗಿದೆ. ಇಂದಿನ ರಾಜಕೀಯ ನಾಯಕರು‌ ನಮಗೆ ನಮ್ಮ ಸಮುದಾಯಕ್ಕೆ ಯಾವ ಪ್ರಾತಿನಿಧ್ಯವನ್ನು ಕೊಡುವುದಿಲ್ಲ. ಇಡೀ ಜಗತ್ತಿಗೆ ಶಿಲ್ಪಕಲೆ ಕೊಟ್ಟವರು ನಾವು. ಕಂಚು, ಬಂಗಾರ, ಪೀಠೋಪಕರಣಗಳ ತಯಾರಿಸುವವರು ನಾವು. ವಿಧಾನಸೌಧ ಕಲಶದಿಂದ, ಪೀಠೋಪಕರಣಗಳಿಂದ ಅಲಂಕರಿಸಿದ್ದು ವಿಶ್ವಕರ್ಮರು.

ಆದರೂ ನಮಗೆ ವಿಧಾನಸೌಧದಲ್ಲಿ ನಮ್ಮ ನಾಯಕರು ಯಾರೂ ಇಲ್ಲ. ನಮ್ಮ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಹಾಗೂ ಇನ್ನೊಬ್ಬರು ಮಾತ್ರ ಎಂಎಲ್ಸಿ ಆಗಿದ್ದಾರೆ ವಿನಃ ಯಾವ ರಾಜಕೀಯ ಪ್ರಾತಿನಿಧ್ಯವೂ ಇಲ್ಲ.‌ ಹೀಗಾಗಿ ನಮ್ಮ ಸಮಾಜ ಯಾವುದೇ ಕ್ಷೇತ್ರದಲ್ಲಿ ಅದರಲ್ಲೂ ರಾಜಕೀಯ ರಂಗದಲ್ಲಿ ಸರಕಾರದ ಸೌಲಭ್ಯ ಪಡೆಯುವಲ್ಲಿ ನಾವು ಹಿಂದೆ ಉಳಿದಿದ್ದು ಮೊದಲು ಸಮಾಜ ‌ಜಾಗೃತರಾಗಬೇಕಿದೆ.

ಒಗ್ಗಟ್ಟಿನ ಮೂಲಕ ಹೋರಾಟಕ್ಕಿಳಿದಾಗ ಮಾತ್ರ ನಮ್ಮ ಕೂಗು ವಿಧಾನಸೌಧ ಮುಟ್ಟುತ್ತದೆ. ಒಗ್ಗಟ್ಟಿನ ಶಕ್ತಿಯಿಂದ ಮಾತ್ರ ಸರಕಾರಕ್ಕೆ ನಮ್ಮ ಹಕ್ಕು ಕೇಳಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ಸಮಾಜದ ಒಳಿತಿಗಾಗಿ ಒಂದಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಸಮಾಜದ ವಿವಿಧ ಶ್ರೀಗಳು, ಜಿಲ್ಲೆಯ ವಿಶ್ವಕರ್ಮ ಸಮಾಜದ ಮುಖಂಡರು, ಸಮಾಜ ಬಾಂಧವರು ಪಾಲ್ಗೊಂಡಿದ್ದರು.

error: Content is protected !!