
ಬೆಂಗಳೂರು : ಟಿಕೆಟ್ ಸಿಗಲಿಲ್ಲವೆಂದು ಯಾರೋ ಕೆಲವರು ತೊರೆದರೆ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಆದರೆ, ದುಡುಕಿನ ನಿರ್ಧಾರ ಕೈಗೊಂಡು ತೊರೆದವರಿಗೆ ಬಿಜೆಪಿ ಬಾಗಿಲು ಬಂದ್ ಆಗಲಿದೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎಚ್ಚರಿಸಿದರು.
ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ, ದೇಶ ಸೇವೆ ಮನೋಭಾವದ ಕೋಟ್ಯಂತರ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವವುಳ್ಳ ಪಕ್ಷದಲ್ಲಿ ಇರುವುದು ದೊಡ್ಡ ಸೌಭಾಗ್ಯದ ಸಂಗತಿ. ವೈಯಕ್ತಿಕ, ಕಾರಣಕ್ಕಾಗಿ ಪಕ್ಷ ಬಿಟ್ಟವರಿಗೆ ತೊಂದರೆಯೇ ಹೊರತು ಪಕ್ಷಕ್ಕೆ ಏನೂ ಆಗುವುದಿಲ್ಲ ಎಂದರು.
ಗುಂಪುಗಾರಿಕೆ, ಆಂತರಿಕ ಕಿತ್ತಾಟ, ಬಹಿರಂಗ ಜಗಳವಾಡುವ, ನಾಯಕತ್ವವಿಲ್ಲದ ಕಾಂಗ್ರೆಸ್ ಪಕ್ಷವನ್ನು ಲಕ್ಷ್ನಣ ಸವದಿ ಸೇರುತ್ತಿದ್ದು, ಮುಂದೊಂದು ದಿನ ಈ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಪಶ್ಚಾತ್ತಾಪಪಡುವರು ಎಂದು ಅರುಣ್ ಸಿಂಗ್ ಭವಿಷ್ಯ ನುಡಿದರು.