ಬಳ್ಳಾರಿ: ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯು ಗುರುವಾರ ಆರಂಭವಾಗಿದೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಮೊದಲ ದಿನ ಇಬ್ಬರು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ರೆಡ್ಡಿ ಹಾಗೂ ಎಸ್‌ಯುಸಿಐ ಪಕ್ಷದ ಅಭ್ಯರ್ಥಿ ಆರ್.ಸೋಮಶೇಖರ ಗೌಡ ಮಹಾನಗರ ಪಾಲಿಕೆಯ ಚುನಾವಣೆ ಅಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಇದರೊಂದಿಗೆ ಮೊದಲ ದಿನವೇ ಎರಡು ನಾಮಪತ್ರ ಸಲ್ಲಿಕೆಯಾದಂತಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ, ರೇಷನ್ ಪದ್ಧತಿಯನ್ನು ಬಲಪಡಿಸುವುದು, ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಎಸ್‌ಯುಸಿಐ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರ ಕಡಿವಾಣಕ್ಕೆ ಕಠಿಣ ಕ್ರಮಕೈಗೊಳ್ಳುವುದು, ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವುದು, ಕೋಮುವಾದ ತಡೆಗಟ್ಟುವುದು ಹಾಗೂ ಜನರ ನಡುವೆ ಸಾಮರಸ್ಯ ಬೆಳೆಸುವುದಕ್ಕೆ ಆದ್ಯತೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ವಾಗ್ದಾನ ನೀಡಿದೆ.
ಪ್ರತಿ ವಾರ್ಡ್‍ಗಳಲ್ಲಿ ಸುಸಜ್ಜಿತ ‘ಜನ ಚಿಕಿತ್ಸಾಲಯ’ ತೆರೆಯುವುದು, ನಗರದಲ್ಲಿ ರಿಂಗ್ ರೋಡ್ ನಿರ್ಮಿಸುವುದು, ಉದ್ಯೋಗ ಖಾತ್ರಿ ಯೋಜನೆಯನ್ನು ನಗರಕ್ಕೂ ವಿಸ್ತರಿಸುವುದು, ರೈತರ, ಕಾರ್ಮಿಕರ, ಮಹಿಳೆಯರ, ವಿದ್ಯಾರ್ಥಿ-ಯುವಜನರ ಬೇಡಿಕೆಗಳನ್ನು ವಿಧಾನ ಸಭೆಯಲ್ಲಿ ಮೊಳಗಿಸುವುದಾಗಿಯೂ ಆಶ್ವಾಸನೆ ನೀಡಿದೆ.
ಎಸ್‌ಯುಸಿಐ ರಾಜ್ಯ ಘಟಕದ ಉಪಾಧ್ಯಕ್ಷ ರಾಧಾಕೃಷ್ಣ ಉಪಾಧ್ಯ, ಬಳ್ಳಾರಿ ನಗರ ಅಭ್ಯರ್ಥಿ ಆರ್.ಸೋಮಶೇಖರ ಗೌಡ, ಕಂಪ್ಲಿ ಕ್ಷೇತ್ರದ ಅಭ್ಯರ್ಥಿ ಎ.ದೇವದಾಸ್, ಜಿಲ್ಲಾ ಸಮಿತಿ ಸದಸ್ಯರಾದ ಮಂಜುಳಾ ಎಂ.ಎನ್.ನಾಗಲಕ್ಷ್ಮಿ.ಡಿ., ಡಾ.ಪ್ರಮೋದ್, ಗೋವಿಂದ್ ಮುಂತಾದವರು ಉಪಸ್ಥಿತರಿದ್ದರು.