
ಬೆಂಗಳೂರು: ಈ ವರ್ಷದ ಸಿಇಟಿ ಪರೀಕ್ಷೆಗೆ ( CET Exam ) ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ( Online Application ) ಅರ್ಹತೆಗೆ ಅನುಗುಣವಾಗಿ ಸಮರ್ಪಕ ಮಾಹಿತಿ ತಿದ್ದುಪಡಿಗೆ ಏಪ್ರಿಲ್ 15ರ ಬೆಳಿಗ್ಗೆ 11 ಗಂಟೆಯವರೆಗೆ ಅವಕಾಶವಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ( Karnataka Examination Authority – KEA ) ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.
ಈ ಸಂಬಂಧ ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿದ್ಯಾರ್ಥಿಗಳು ತಮ್ಮ ಪ್ರವರ್ಗ ಮೀಸಲಾತಿ, ವಾರ್ಷಿಕ ಆದಾಯ, ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿ, ವಿಶೇಷ ಕ್ಯಾಟಗರಿ ಇತ್ಯಾದಿಗಳನ್ನು ಸರಿಯಾಗಿ ತುಂಬಲು ಇದರಿಂದ ಅವಕಾಶವಾಗಲಿದೆ. ತಿದ್ದುಪಡಿ ಮಾಡಿದ ಬಳಿಕ, ‘ಡಿಕ್ಲರೇಷನ್ ಬಟನ್’ ಆಯ್ಕೆ ಮಾಡಿಕೊಂಡು, ನಂತರವಷ್ಟೇ ‘ಫೈನಲ್ ಸಬ್‌ಮಿಶನ್’ ಸಲ್ಲಿಸಿ, ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ತಿದ್ದುಪಡಿ ಮಾಡಿದ ಅರ್ಜಿಯ ಮುದ್ರಿತ ಪ್ರತಿಯನ್ನು ವಿದ್ಯಾರ್ಥಿಗಳು ತಮ್ಮ ಸುರಕ್ಷತೆಗಾಗಿ ಇಟ್ಟಕೊಳ್ಳಬೇಕು. ಇಲ್ಲದೆ ಹೋದರೆ, ಮೊದಲು ಸಲ್ಲಿಸಿದ್ದ ಅರ್ಜಿಯನ್ನೇ ಮುಂದಿನ ಹಂತಗಳಿಗೆ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಇದರಲ್ಲಿ ಅಭ್ಯರ್ಥಿಯ ಹೆಸರು, ತಂದೆ-ತಾಯಿಯ ಹೆಸರು, ಜನ್ಮ ದಿನಾಂಕ ಇತ್ಯಾದಿಗಳ ಬದಲಾವಣೆಗೆ ಅವಕಾಶ ಇರುವುದಿಲ್ಲ. ಇದರಲ್ಲೇನಾದರೂ ಬದಲಾವಣೆಗಳಿದ್ದಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಲಿಯನ್ನು ಸಂಪರ್ಕಿಸಬೇಕು. ಆದರೆ ಸಿಬಿಎಸ್‌ಇ/ಸಿಐಎಸ್‌ಸಿಇ ಪಠ್ಯಕ್ರಮಗಳಲ್ಲಿ 10ನೇ ತರಗತಿ ಓದಿರುವವರು ಈ ವಿವರಗಳನ್ನು ತಮ್ಮ ಅರ್ಜಿಯಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಜೊತೆಗೆ, ರಾಷ್ಟ್ರೀಯತೆಯನ್ನು ತಿದ್ದುಪಡಿ ಮಾಡಿಕೊಳ್ಳಲು ಬಯಸುವ ಓಸಿಐ ಅಭ್ಯರ್ಥಿಗಳು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಹೆಸರಿನಲ್ಲಿ ನಿಗದಿತ ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ ಪಡೆದುಕೊಂಡು, ಏಪ್ರಿಲ್ 13 ಮತ್ತು 15ರಂದು ನೇರವಾಗಿ ಹಾಜರಾಗಬೇಕು ಎಂದು ಪ್ರಕಟಣೆ ತಿಳಿಸಿದೆ.