
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಹಿನ್ನೆಲೆಯಲ್ಲಿ ಹಾಸನ ಟಿಕೆಟ್ ಗೊಂದಲದ ವಿಚಾರ ಸಕ್ಕತ್ ಸದ್ದು ಮಾಡುತ್ತಿದೆ. ಎಚ್ ಡಿ ರೇವಣ್ಣ ಮತ್ತು ಕುಮಾರಸ್ವಾಮಿ ಅವರ ನಡುವೆ ಜಟಾಪಟಿ ನಡೆಯುತ್ತಿದೆ. ಈ ನಡುವೆ ಹಾಸನ ಟಿಕೆಟ್ ಹಂಚಿಕೆ ಬಗ್ಗೆ ಪ್ರಶ್ನೆ ಮಾಡಿದ ಪತ್ರಕರ್ತರೊಬ್ಬರಿಗೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಚಳಿ ಬಿಡಿದ್ದಾರೆ.
ದೇವೇಗೌಡ ಅವರು ದೆಹಲಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದ ವೇಳೆ, ಪತ್ರಕರ್ತರೊಬ್ಬರು ಹಾಸನ ಟಿಕೆಟ್ ವಿಚಾರವಾಗಿ ಪ್ರಶ್ನೆ ಕೇಳಿದ್ದಾರೆ. ಪತ್ರಕರ್ತನ ಪ್ರಶ್ನೆಗೆ ಬಹಳ ತೀಕ್ಷ್ಣವಾಗಿ ದೇವೇಗೌಡರು ತಿವಿದಿದ್ದಾರೆ.
“ಅದು ಬಿಡಿ, ನೀವು ಹಾಸನದ ವಿಚಾರಕ್ಕೆ ಬರ್ತಾ ಇದಿರಿ. ನಾವು ಇನ್ನೂ ಎರಡನೇ ಪಟ್ಟಿ ಬಿಡುಗಡೆ ಮಾಡಿಲ್ಲ. ಅದರಲ್ಲಿ ಮಾಡ್ತೇವೆ. ಈಗಾಗಲೇ ಜೆಡಿಎಸ್ ಒಂದು ಪಟ್ಟಿ ಬಿಡುಗಡೆ ಮಾಡಿದೆ. ನಿಮಗೆ ಬೇರೆ ಪ್ರಶ್ನೆಯೇ ಇಲ್ವಾ?” ಎಂದು ದೇವೇಗೌಡರು ಕುಟುಕಿದ್ದಾರೆ.
ರಾಷ್ಟ್ರೀಯ ಪಕ್ಷ ಬಿಜೆಪಿ ಇನ್ನೂ ಒಂದು ಸ್ಥಾನದ ಅಭ್ಯರ್ಥಿಯನ್ನೂ ಘೋಷಿಸಿಲ್ಲ. ಹಾಸನದ ಬಗ್ಗೇನೇ ಕೆದಕೋದ್ಯಾಕೆ. ಹೋಗಿ ಬಿಜೆಪಿ ನಾಯಕರನ್ನು ಪ್ರಶ್ನಿಸಿ” ಎಂದು ಪತ್ರಕರ್ತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ನಾವು 96-97 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದೇವೆ. ಬಿಜೆಪಿಯದ್ದು ಇನ್ನೂ ಪಟ್ಟಿ ಬಂದಿಲ್ಲ. ಕಾಂಗ್ರೆಸ್ ಎರಡನೇ ಪಟ್ಟಿಗೆ ತಿಣುಕಾಡುತ್ತಿದೆ. ಅವರನ್ನ ಕೇಳೋಗಿ” ಎಂದು ಹೇಳಿದ್ದಾರೆ.
ದೇವೇಗೌಡರು ಪತ್ರಕರ್ತರಿಗೆ ಚಾಟಿ ಬೀಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ಗಳಿಸುತ್ತಿದೆ. “ದೇವೇಗೌಡರು 80-90 ದಶಕದಲ್ಲಿ ಹೇಗಿದ್ದಿರಬಹುದು?” ಎನ್ನುವ ಮಾತುಗಳು ಹರಿಹಾಡುತ್ತಿವೆ.