ಬೆಂಗಳೂರು : ಮುಖ್ಯ ರಸ್ತೆಯನ್ನು ವಿಸ್ತರಣೆ ಮಾಡಲು ನ್ಯಾಯಾಲಯ ತಡೆ ನೀಡಿತ್ತು. ಈ ತಡೆಯನ್ನು ಮೀರಿ ಮನೆಗಳ ತೆರವು ಕಾರ್ಯಾಚರಣೆ ನಡೆಸಿದಂತ ತಹಶೀಲ್ದಾರ್ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಕೋರ್ಟ್ 2 ತಿಂಗಳು ಶಿಕ್ಷೆ ಹಾಗೂ 2 ಸಾವಿರ ದಂಡವನ್ನು ಹೈಕೋರ್ಟ್ ವಿಧಿಸಿದೆ.

ಹುಲಿಯೂರು ದುರ್ಗದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ವಿಸ್ತರಣೆಗಾಗಿ ಮನೆಗಳನ್ನು ತೆರವು ಮಾಡಲು ಸರ್ಕಾರ ಮುಂದಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ 2011ರಲ್ಲಿ ಅರ್ಜಿದಾರರು ಹೈಕೋರ್ಟ್ ಗೆ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆ ನಡೆಸಿದಂತ ನ್ಯಾಯಪೀಠವು ತೆರವು ಕಾರ್ಯಾಚರಣೆಗೂ ಮುನ್ನ ಸೂಕ್ತ ಕಾನೂನು ಪ್ರಕ್ರಿಯೆ ಪಾಲನೆ ಮಾಡಬೇಕು. ಒತ್ತುವರಿದಾರರಿಗೆ ನೋಟಿಸ್ ನೀಡಿ, ಪರಿಶೀಲನೆ ನಡೆಸಬೇಕು ಎಂಬುದಾಗಿ ಜೂನ್ 22, 2012ರಲ್ಲಿ ಆದೇಶಿಸಿತ್ತು.

ಆದ್ರೇ ಈ ಆದೇಶಕ್ಕೂ ಡೋಂಟ್ ಕೇರ್ ಎನ್ನುವಂತೆ ಕುಣಿಗಲ್ ತಹಶೀಲ್ದಾರ್ ಹಾಗೂ ಹುಲಿಯೂರು ದುರ್ಗ ಪಿಡಿಓ 2017ರಲ್ಲಿ ಹುಲಿಯೂರು ದುರ್ಗದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ಮಾರ್ಗದಲ್ಲಿನ ಕೆಲ ಮನೆಗಳನ್ನು ತೆರವುಗೊಳಿಸಿದ್ದರು.

ಈ ಹಿನ್ನಲೆಯಲ್ಲಿ 12 ಮಂದಿ ಅರ್ಜಿದಾರರು ಹೈಕೋರ್ಟ್ ಗೆ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಮಾನ್ಯ ಮಾಡಿದ್ದಂತ ನ್ಯಾಯಮೂರ್ತಿ ಬಿ ವೀರಪ್ಪ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ನಾಯಕ್ ಅವರಿದ್ದ ಪೀಠವು, ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಕ್ಕಾಗಿ ಕುಣಿಗಲ್ ತಹಶೀಲ್ದಾರ್ ಹಾಗೂ ಹುಲಿಯೂರು ದುರ್ಗ ಪಿಡಿಓಗೆ 2 ತಿಂಗಳು ಜೈಲು ಶಿಕ್ಷೆ ಹಾಗೂ 2 ಸಾವಿರ ರೂ ದಂಡವನ್ನು ವಿಧಿಸಿ ಆದೇಶಿಸಿದೆ.

error: Content is protected !!