ಬಳ್ಳಾರಿ: ಕಾಂಗ್ರೆಸ್ ನಾಯಕರು ಕಿವಿಯಲ್ಲಿ ಇಷ್ಟು ದಿನ ಹೂವು ಇಡುತ್ತಿದ್ದರು, ಇದೀಗ ಹೈಟೆಕ್ ಮಾದರಿಯಲ್ಲಿ ಗ್ಯಾರಂಟಿ ಕಾರ್ಡ್ ಇಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಗ್ಯಾರೆಂಟಿ ಗಿಮಿಕ್ಸ್‌ಗೆ ರಾಜ್ಯದ ಮತದಾರರು ಮರಳಾಗುವುದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಳ್ಳಾರಿ ನಗರದ ಕನಕ ದುರ್ಗಮ್ಮ ರೈಲ್ವೆ ಅಂಡರ್ ಪಾಸ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಗಲೀಕರಣ ಮಾಡುವ 8.87 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಿ.ಶ್ರೀರಾಮುಲು, ಕಾಂಗ್ರೆಸ್ ನಾಯಕರು ಇಷ್ಟು ದಿನ ಜನರ ಕಿವಿಯಲ್ಲಿ ಹೂವು ಇಡುತ್ತಿದ್ದರು. ಇದೀಗ ಹೈಟೆಕ್ ಮಾದರಿಯಲ್ಲಿ ಗ್ಯಾರಂಟಿ ಕಾರ್ಡ್ ಇಡುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಗ್ಯಾರಂಟಿ ಕಾರ್ಡ್, ವಾರಂಟಿ ಕಾರ್ಡ್‌ಗಳನ್ನು ಜನ‌ ನಂಬಲ್ಲ. ಯಾಕೆಂದರೆ ಅಧಿಕಾರಕ್ಕೆ ಬಾರದೇ ಇರುವವರು ಏನು ಗ್ಯಾರಂಟಿ ಕೊಡುತ್ತಾರೆ. ಚುನಾವಣೆ ಬಂದಾಗ ಸುಳ್ಳು ಹೇಳುವುದು ಸಾಮಾನ್ಯ. ಇದೀಗ ಗ್ಯಾರಂಟಿ ಕಾರ್ಡ್ ಹೆಸರಲ್ಲಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರೋದು ಖಚಿತ. ಕಾಂಗ್ರೆಸ್ ಗಿಮಿಕ್ಸ್‌ಗಳಿಗೆ ಜನರು ಮರಳಾಗುವುದಿಲ್ಲ ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟದ ಬಗ್ಗೆ ಮಾತನಾಡಿದ ಸಚಿವ ಶ್ರೀರಾಮುಲು, ಕಳೆದ ಚುನಾವಣೆಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ನಿರ್ಧಾರದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನಾನು ಇಬ್ಬರೂ ಅನಿವಾರ್ಯ ಕಾರಣಕ್ಕಾಗಿ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕಾಯಿತು. ಸರ್ಕಾರ ರಚನೆ ಆಗಬೇಕಾದರೆ ಜನಪ್ರಿಯ ಅಭ್ಯರ್ಥಿಗಳು ಬೇರೆ ಬೇರೆ ಕಡೆಗಳಲ್ಲಿ ನಿಲ್ಲಬೇಕಾಗುತ್ತದೆ ಎಂದರು.

ಮಾತು ಸಿದ್ದರಾಮಯ್ಯ ಪರ ಮುಂದುವರಿಸಿದ ಅವರು, ಇದು ಸಿದ್ದರಾಮಯ್ಯ ನನ್ನ ಸ್ವಾರ್ಥ ಅಲ್ಲ. ಸಿದ್ದರಾಮಯ್ಯ ವರುಣಾದಲ್ಲಿ ನಿಲ್ಲಬೇಕು. ಆದರೆ ಮಗನ ರಾಜಕೀಯಕ್ಕಾಗಿ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಹೋಗುತ್ತಿಲ್ಲ. ಹೀಗಾಗಿ ಕ್ಷೇತ್ರ ಗೊಂದಲವಾಗುತ್ತಿದೆ. ಸಿದ್ದರಾಮಯ್ಯ ಎಲ್ಲಿಂದ ಬೇಕಾದರೂ ಸ್ಪರ್ಧೆ ಮಾಡಲಿ. ಅದು ಅವರ ಪಕ್ಷಕ್ಕೆ ಬಿಟ್ಟದ್ದು, ರಾಜಕೀಯದಲ್ಲಿ ಇದೊಂದು ಸಹಜ ಪಕ್ರಿಯೆ ಎಂದು ಹೇಳಿದ ಶ್ರೀರಾಮುಲು ಅವರು, ಸಿದ್ದರಾಮಯ್ಯ ಬಗ್ಗೆ ನನಗೇನೂ ಸಾಫ್ಟ್ ಕಾರ್ನರ್ ಎನ್ನುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ಈ ವೇಳೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರೊಂದಿಗೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಬುಡಾ ಅಧ್ಯಕ್ಷ ಎಸ್.ಮಾರುತಿ ಪ್ರಸಾದ್, ಆಯುಕ್ತ ವಿ.ರಮೇಶ್, ಮಾಜಿ ಸಂಸದರಾದ ಸಣ್ಣ ಪಕ್ಕೀರಪ್ಪ, ಜೆ.ಶಾಂತಾ, ಪಾಲಿಕೆ ಸದಸ್ಯರಾದ ಕೆ.ಎಸ್.ಅಶೋಕ್ ಕುಮಾರ್, ಶ್ರೀನಿವಾಸ್ ಮೋತ್ಕರ್, ಸುರೇಖಾ ಮಲ್ಲನಗೌಡ, ಹನುಮಂತ ಕೆ, ಮುಖಂಡರಾದ ಕೆ.ಎಸ್.ದಿವಾಕರ್, ಡಾ.ಡಿ.ಎಲ್.ರಮೇಶ್ ಗೋಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಬಿ. ಶ್ರೀರಾಮುಲು ಸ್ಫರ್ಧೆ

ಸಚಿವ ಬಿ. ಶ್ರೀರಾಮುಲು ಸದ್ಯ ಕರ್ನಾಟಕ ವಿಧಾನಸಭಾ ಚುನಾವಣೆ ಗೆಲುವಿಗಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವೆ ಎಂದು ಇತ್ತೀಚಿಗೆ ತಿಳಿಸಿದ್ದರು. ಹಲವಾರು ವರ್ಷಗಳಿಂದ ಗ್ರಾಮೀಣ ಕ್ಷೇತ್ರದಲ್ಲಿ ಸೇವೆ ಮಾಡಿದ್ದೇನೆ. ಈಗ ಮತ್ತೊಮ್ಮೆ ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ. ಈ ಬಗ್ಗೆ ಹೈಕಮಾಂಡ್‌ಗೂ ತಿಳಿಸಿದ್ದು, ಬಹುತೇಕ ಎಲ್ಲರ ಅಪೇಕ್ಷೆ ಮೇರೆಗೆ ಬಳ್ಳಾರಿ ಗ್ರಾಮೀಣದಿಂದಲೇ ಸ್ಪರ್ಧೆ ಮಾಡುವೆ. ಕಳೆದ ಬಾರಿ ಉತ್ತರ ಕರ್ನಾಟಕದಲ್ಲಿ ನಮಗೆ ಸಂಖ್ಯೆ ಕಡಿಮೆಯಾಗಿತ್ತು. ಇದರಿಂದಾಗಿ ಸರ್ಕಾರ ರಚನೆ ಮಾಡಲು ಕಷ್ಟವಾಗಿತ್ತು. ಆದರೆ ಈ ಬಾರಿ ನೂರಕ್ಕೆ ನೂರರಷ್ಟು ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

error: Content is protected !!